
ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧಿತರಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಐಎಎಸ್ ಅಧಿಕಾರಿ ವಿಜಯಶಂಕರ್ ಬೆಂಗಳೂರಿನ ಜಯನಗರದಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಬೇರೆ ಕಾರಣವಿರಬಹುದೇ ಎನ್ನುವ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಐಎಂಎ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳ ತಂಡ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರಿಂದ ಬಂಧನ ಭೀತಿಗೆ ಒಳಗಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗಿದೆ.
ತಾಯಿ, ಪತ್ನಿ, ಇಬ್ಬರು ಮಕ್ಕಳೊಂದಿಗೆ ಜಯನಗರದಲ್ಲಿ ವಾಸವಾಗಿದ್ದ ವಿಜಯಶಂಕರ್ ಮಂಗಳವಾರ ಸಂಜೆ ಮನೆಯವರೆಲ್ಲ ಸಂಬಂಧಿಕರ ಮನೆಗೆ ಹೋಗಿದ್ದ ವೇಳೆ ಫ್ಯಾನಿಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ವಿಜಯಶಂಕರ್ 1.50 ಕೋಟಿ ರೂ. ಲಂಚ ಪಡೆದ ಆರೋಪ ಕೇಳಿಬಂದಿದ್ದು ಅವರ ಮನೆ ಮೇಲೆ ದಾಳಿ ನಡೆಸಿದ್ದ ಎಸ್ಐಟಿ ದಾಖಲೆ ವಶಪಡಿಸಿಕೊಂಡಿದ್ದು, ಬಳಿಕ ಅವರನ್ನು ಬಂಧಿಸಲಾಗಿತ್ತು. ಐಎಂಎ ಪ್ರಕರಣದಲ್ಲಿ ಅವರನ್ನು 16ನೇ ಆರೋಪಿಯಾಗಿ ಎಸ್ಐಟಿ ಗುರುತಿಸಿದ್ದು ಸಿಬಿಐ ನಾಲ್ಕನೇ ಆರೋಪಿಯಾಗಿ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿತ್ತು. ಮೃತದೇಹ ಕಂಡು ಬಂದ ಸ್ಥಳದಲ್ಲಿ ಪರಿಶೀಲನೆ ನಡೆಸಿದ ಪೊಲೀಸರು ಸಾವಿನ ಕುರಿತಾದ ತನಿಖೆ ಕೈಗೊಂಡಿದ್ದಾರೆ.
ಎಫ್ಎಸ್ಎಲ್ ಅಧಿಕಾರಿಗಳು ಬರೆವ ಒಳಗೆ ನೇಣಿನ ಕುಣಿಕೆಯಿಂದ ಮೃತದೇಹ ಇಳಿಸಲಾಗಿದೆ. ಕುತ್ತಿಗೆಯಲ್ಲಿನ ಮಾರ್ಕ್ ಕಾಣದಂತೆ ಬಟ್ಟೆಯಿಂದ ಮುಚ್ಚಲಾಗಿದೆ ಎನ್ನಲಾಗಿದ್ದು, ಅವರ ಸಾವಿನ ಕುರಿತಾದ ಅನುಮಾನ, ಗೊಂದಲ ಮೂಡಿದ್ದು ಪೊಲೀಸರ ತನಿಖೆಯಲ್ಲಿ ಕಾರಣ ಗೊತ್ತಾಗಲಿದೆ ಎನ್ನಲಾಗಿದೆ.