ತಮಿಳುನಾಡಿನಲ್ಲಿ ಕೊರೋನಾ ವೈರಸ್ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಜನರ ಸಂಚಾರ ನಿಯಂತ್ರಿಸಲು ಸರ್ಕಾರ ಇ- ಪಾಸ್ ಗಳನ್ನು ನೀಡುತ್ತಿದೆ. ಇಲ್ಲೊಬ್ಬ ಭೂಪ ತನ್ನ ಸುಗಮ ಸಂಚಾರಕ್ಕಾಗಿ ಆಹ್ವಾನ ಪತ್ರಿಕೆಯಲ್ಲಿ ಐಎಎಸ್ ಅಧಿಕಾರಿ ಎಂದು ನಮೂದಿಸಿ ಸಂಚರಿಸುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಕೊಡೈಕೆನಾಲ್ ನಿವಾಸಿ 26 ವರ್ಷದ ವೇಲುಮಣಿ ಲಾಕ್ಡೌನ್ ಗೆ ಮುನ್ನ ಕೊಯಮತ್ತೂರಿನಲ್ಲಿ ವಿವಾಹವಾದರು. ಆದರೆ ರಿಸೆಪ್ಶನ್ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಜೂ.19 ರಂದು ಕಾರ್ಯಕ್ರಮ ಆಯೋಜಿಸಿದ್ದ.
ಕಾರ್ಯಕ್ರಮಕ್ಕೆ ಕೊಯಮತ್ತೂರಿನಿಂದ ಕೊಡೈಕೆನಾಲ್ ಗೆ ತೆರಳಲು ಇ- ಪಾಸ್ ಲಭ್ಯವಾಗಲಿಲ್ಲ. ಹಾಗೆಯೇ ಸಮಾರಂಭವನ್ನು ತಪ್ಪಿಸಿಕೊಳ್ಳಲು ಆತ ಇಷ್ಟಪಡಲಿಲ್ಲ. ಅದಕ್ಕಾಗಿ ಆತ ವಿವಾಹ ಆಮಂತ್ರಣ ಪತ್ರವೊಂದನ್ನು ಸಿದ್ಧಪಡಿಸಿ ತನ್ನ ಹೆಸರಿನ ಮುಂದೆ ಐಎಎಸ್ (ತರಬೇತಿ) ಎಂದು ಪದನಾಮ ಹಾಕಿಕೊಂಡು ಹೊರಟೇಬಿಟ್ಟ.
ಇ- ಪಾಸ್ ಕೇಳಿದಲ್ಲಿ ಆ ಆಮಂತ್ರಣ ಪತ್ರ ತೋರಿಸಿ ಸಾಗಿದ. ಆದರೆ ದಿಂಡಿಗಲ್ ಮುಖ್ಯರಸ್ತೆಯ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಅನುಮಾನಗೊಂಡು ಐಡಿ ಕಾರ್ಡ್ ತೋರಿಸುವಂತೆ ಕೋರಿದರು.
ತಾನು ಸಿಕ್ಕಿಬಿದ್ದಿದ್ದು ಖಾತ್ರಿಯಾಗುತ್ತಿದ್ದಂತೆ, ಆತ ಅಮಾಯಕನಂತೆ ನಟಿಸಲು ಆರಂಭಿಸಿದ. ಬಳಿಕ ಐಎಎಸ್ ಟ್ರೈನಿ ಎಂದು ಬೇರೆ ಯಾರಿಗೂ ಮೋಸ ಮಾಡದೇ ಇರುವುದನ್ನು ಖಾತ್ರಿಪಡಿಸಿಕೊಂಡ ಪೊಲೀಸರು, ಸಮಾರಂಭಕ್ಕೆ ಹಾಜರಾಗಲು ಅವಕಾಶ ಕೊಟ್ಟರು. ಜತೆಯಲ್ಲಿದ್ದ ನವ ವಧುವಿಗೆ ತನ್ನ ಪತಿ ಐಎಎಸ್ ಅಲ್ಲ ಎಂದು ಅರಿವಿದ್ದಿದ್ದನ್ನು ಖಾತ್ರಿಮಾಡಿಕೊಂಡು ಕಾರ್ಯಕ್ರಮಕ್ಕೆ ತೆರಳಲು ಪೊಲೀಸರು ಅವಕಾಶ ಮಾಡಿಕೊಟ್ಟರು. ಆದರೆ, ಮರುದಿನ ಆತನ ಮೇಲೆ ಪ್ರಕರಣ ದಾಖಲಿಸಿ ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದರು.