ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕನಿಷ್ಠ 20 ದಿನ ಸಂಪೂರ್ಣ ಲಾಕ್ಡೌನ್ ಮಾಡುವಂತೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಜನರ ಪ್ರಾಣದ ಜೊತೆ ಚೆಲ್ಲಾಟ ನಿಲ್ಲಿಸಿ. ಕೆಲವೇ ಪ್ರದೇಶಗಳಲ್ಲಿ ಸೀಲ್ ಡೌನ್, ಲಾಕ್ ಡೌನ್ ಮಾಡಿದರೆ ಪ್ರಯೋಜನವಿಲ್ಲ. ಬೆಂಗಳೂರಿನ ನಿವಾಸಿಗಳು ಬದುಕಬೇಕಾದರೆ ಕೂಡಲೇ ಕನಿಷ್ಠ 20 ದಿನ ಸಂಪೂರ್ಣ ಲಾಕ್ ಡೌನ್ ಮಾಡಿ. ಇಲ್ಲವಾದಲ್ಲಿ ಬೆಂಗಳೂರು ಮತ್ತೊಂದು ಬ್ರೆಜಿಲ್ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಜನರ ಆರೋಗ್ಯ ಮುಖ್ಯವೇ ಹೊರತು ಆರ್ಥಿಕತೆಯಲ್ಲ, ಬಡವರು, ಕಾರ್ಮಿಕರಿಗೆ ಕೂಡಲೇ ಪಡಿತರ ವಿತರಿಸಬೇಕು. ರಾಜ್ಯದ 50 ಲಕ್ಷ ಮಂದಿ ಶ್ರಮಿಕ ವರ್ಗಕ್ಕೆ ತಲಾ 6 ಸಾವಿರ ರೂಪಾಯಿ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದ್ದು, ಚಾಲಕರು, ನೇಕಾರರು, ಮಡಿವಾಳರು ಸೇರಿದಂತೆ ವಿವಿಧ ವರ್ಗಕ್ಕೆ ರಾಜ್ಯ ಸರ್ಕಾರ ಈಗಾಗಲೇ ಘೋಷಿಸಿರುವ ಪರಿಹಾರ ಸಿಕ್ಕಿಲ್ಲ ಎಂದು ದೂರಿದ್ದಾರೆ.
ಬರಿ ಪ್ಯಾಕೇಜ್ ಘೋಷಣೆ ಮಾಡಿದರೆ ಸಾಲದು ಅದರ ಅನುಷ್ಠಾನಕ್ಕೆ ತಕ್ಷಣ ಕಾರ್ಯೋನ್ಮುಖವಾಗಬೇಕು. ಪ್ಯಾಕೇಜ್ ಘೋಷಣೆ ಮಾಡಿ ಸರ್ಕಾರ ಅಂಗೈಯಲ್ಲಿ ಅರಮನೆ ತೋರಿಸಬಾರದು ಎಂದು ಟೀಕಿಸಿದ್ದಾರೆ.