ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ಸಾರ್ವಜನಿಕರ ಬದುಕನ್ನು ಮಾತ್ರವಲ್ಲ ವಿದ್ಯಾರ್ಥಿಗಳ ಭವಿಷ್ಯವನ್ನೂ ಮುಸುಕಾಗಿಸಿದೆ. ಕೊರೊನಾ ಕಾರಣಕ್ಕೆ ಕಳೆದ ಮೂರು ತಿಂಗಳಿಗೂ ಅಧಿಕ ಕಾಲದಿಂದ ಶಾಲಾ -ಕಾಲೇಜುಗಳು ಬಂದ್ ಆಗಿದ್ದು, ಯಾವಾಗ ಶುರುವಾಗಲಿದೆ ಎಂಬುದರ ಕುರಿತು ಯಾರ ಬಳಿಯೂ ಖಚಿತತೆಯಿಲ್ಲ.
ಇದರ ಮಧ್ಯೆ ಮುಂದೂಡಿಕೆಯಾಗಿದ್ದ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಆದರೆ ಕೊರೊನಾ ಸೋಂಕು ದಿನೇ ದಿನೇ ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಜುಲೈನಲ್ಲಿ ನಿಗದಿಯಾಗಿದ್ದ ನೀಟ್ ಮತ್ತು ಜೆಇಇ ಪರೀಕ್ಷೆಗಳು ನಡೆಯುವುದು ಅನುಮಾನ ಎಂದು ಹೇಳಲಾಗಿದೆ.
ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶಕ್ಕೆ ನಡೆಸಲಾಗುವ ಈ ಎರಡು ಪರೀಕ್ಷೆಗಳನ್ನು ಸದ್ಯದ ಪರಿಸ್ಥಿತಿಯಲ್ಲಿ ನಡೆಸುವುದು ಬೇಡ ಎಂಬ ನಿರ್ಧಾರಕ್ಕೆ ಶಿಕ್ಷಣ ಸಚಿವಾಲಯ ಬಂದಿದೆ ಎನ್ನಲಾಗಿದ್ದು, ವಿದ್ಯಾರ್ಥಿಗಳ ಸುರಕ್ಷತೆ ಸರ್ಕಾರದ ಮೊದಲ ಆದ್ಯತೆ ಎಂಬ ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ.