ತೆಲಂಗಾಣದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಹೋಂಗಾರ್ಡ್ ಒಬ್ಬನಿಗೆ 10 ವರ್ಷ ಕಠಿಣ ಶಿಕ್ಷೆ ನೀಡಲಾಗಿದೆ.
ಹೈದರಾಬಾದ್ ನ ನ್ಯಾಯಾಲಯ ವಿಚಾರಣೆ ನಡೆಸಿದ್ದು 2018 ರಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದ 30 ವರ್ಷದ ಗೃಹರಕ್ಷಕ ದಳ ಸಿಬ್ಬಂದಿ ಒಬ್ಬನಿಗೆ ಜೈಲು ಶಿಕ್ಷೆ ವಿಧಿಸಿದೆ. ಮೊದಲನೇ ಹೆಚ್ಚುವರಿ ಮೆಟ್ರೋಪಾಲಿಟನ್ ಸೆಷನ್ಸ್ ಕೋರ್ಟ್ ನ್ಯಾಯಾಧೀಶರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೋ) ಕಾಯ್ದೆ ಮತ್ತು ಐಪಿಸಿ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಆರೋಪಿ ತಪ್ಪಿತಸ್ಥನೆಂದು ಪರಿಗಣಿಸಿ 10 ವರ್ಷಗಳ ಕಠಿಣ ಶಿಕ್ಷೆ, 22 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.
ಪ್ರಾಸಿಕ್ಯೂಷನ್ ಪ್ರಕಾರ ಗೃಹರಕ್ಷಕನಾಗಿದ್ದ ವ್ಯಕ್ತಿ ಬಾಲಕಿಯ ಮನೆಯಲ್ಲೇ ಇದ್ದ. ಆಕೆಯ ತಾಯಿ ಕೆಲಸದಿಂದ ಹೊರಹೋಗುತ್ತಿದ್ದ ವೇಳೆಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದ. 2018 ರ ಜುಲೈನಲ್ಲಿ ಬಾಲಕಿಯಿಂದ ಘಟನೆ ತಿಳಿದ ಶಾಲಾ ಶಿಕ್ಷಕಿ ತಾಯಿಗೆ ಮಾಹಿತಿ ನೀಡಿದ್ದರು. ಬಳಿಕ ತಾಯಿ ಪೊಲೀಸರಿಗೆ ದೂರು ನೀಡಿದ್ದು ಆರೋಪಿಯನ್ನು ಬಂಧಿಸಲಾಗಿತ್ತು.