ಬರೋಬ್ಬರಿ 40 ವರ್ಷಗಳ ನಂತರ 94 ವಯಸ್ಸಿನ ವೃದ್ಧೆಯೊಬ್ಬರು ಮನೆಗೆ ಮರಳಲು ಅಣಿಯಾಗಿದ್ದಾರೆ. 1979-80 ರ ಆಸುಪಾಸಿನಲ್ಲಿ ಕಾಣೆಯಾಗಿದ್ದ ಮಹಾರಾಷ್ಟ್ರದ ಪಂಚುಭಾಯಿ ಎಂಬಾಕೆ ಇಂಟರ್ ನೆಟ್ ನೆರವಿನಿಂದ ಕುಟುಂಬ ಸೇರುವ ತವಕದಲ್ಲಿದ್ದಾರೆ.
ಕಾಣೆಯಾಗಿದ್ದ ಪಂಚುಭಾಯಿಗಾಗಿ ಹುಡುಕಿ ಸುಸ್ತಾಗಿದ್ದ ಕುಟುಂಬಸ್ಥರು ಸುಮ್ಮನಾಗಿದ್ದರು. 40 ವರ್ಷದ ನಂತರ ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ಪತ್ತೆಯಾಗಿದ್ದಾರೆ.
ರಸ್ತೆಬದಿ ಶೋಚನೀಯ ಸ್ಥಿತಿಯಲ್ಲಿದ್ದ ಈಕೆಯನ್ನು ಅಪರಿಚಿತ ಟ್ರಕ್ ಚಾಲಕರೊಬ್ಬರು ಗಮನಿಸಿ, ಮನೆಗೆ ಕರೆದೊಯ್ದು ಉಪಚರಿಸಿದ್ದಾರೆ. ಆದರೆ, ಆಕೆಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಕೇಳಿದರೆ ಏನನ್ನೂ ಹೇಳುತ್ತಿರಲಿಲ್ಲ.
ಕೊನೆಗೆ ಟ್ರಕ್ ಚಾಲಕನ ಮಗ ಇಸ್ರರ್ ಖಾನ್, ಆಕೆಯ ವಿಡಿಯೋ ಸೆರೆಹಿಡಿದು, ಫೇಸ್ ಬುಕ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾನೆ. ಯಾರೊಬ್ಬರೂ ಆಕೆಯನ್ನು ಹುಡುಕಿಕೊಂಡು ಬರಲಿಲ್ಲ.
ಎಲ್ಲ ಮರೆತಂತಿದ್ದರೂ ಆಗೊಮ್ಮೆ ಈಗೊಮ್ಮೆ ಮಾತನಾಡುತ್ತಿದ್ದ ಪಂಚುಭಾಯಿಯನ್ನು ಖಾನ್ ಕುಟುಂಬ, ಮಾತಿಗೆಳೆದಾಗ ಖಂಜ್ಮಾ ನಗರ ಎಂಬ ಊರಿನ ಹೆಸರು ಹೇಳಿದ್ದಾರೆ. ಗೂಗಲ್ ಮಾಡಿ ನೋಡಿದಾಗ ಅಂತಹ ಯಾವ ಸ್ಥಳವೂ ಸಿಗಲಿಲ್ಲ.
ಕಡೆಗೆ ಪಾರಸಪುರ ಎಂಬ ಊರಿನ ಹೆಸರು ಬಾಯಿಬಿಟ್ಟಿದ್ದಾರೆ. ಗೂಗಲ್ ಅಲ್ಲಿ ಹುಡುಕಿದಾಗ ಮಹಾರಾಷ್ಟ್ರದ ಗ್ರಾಮ ಎಂದು ತಿಳಿದುಬಂದಿದೆ. ಟ್ರಕ್ ಚಾಲಕ ಅಲ್ಲಿರುವ ತನ್ನ ಸ್ನೇಹಿತರಿಗೆ ವೃದ್ಧೆಯ ಫೋಟೋ, ವಿಡಿಯೋ ಕಳುಹಿಸಿ, ಸ್ಥಳೀಯವಾಗಿ ವೈರಲ್ ಆಗಿತ್ತು. ವೃದ್ಧೆಯ ಮನೆಯವರಿಗೂ ತಲುಪಿತ್ತು.
ಖುಷಿಯಲ್ಲಿ ಖಾನ್ ಕುಟುಂಬವನ್ನು ವೃದ್ಧೆಯ ಕುಟುಂಬಸ್ಥರು ಸಂಪರ್ಕಿಸಿದ್ದು, ಸದ್ಯ ಲಾಕ್ ಡೌನ್ ಇರುವುದರಿಂದ ಭೇಟಿ ಸಾಧ್ಯವಾಗಿಲ್ಲ. ಒಟ್ಟಿನಲ್ಲಿ ಇಂಟರ್ ನೆಟ್ ಸಹಾಯದಿಂದ ವೃದ್ಧೆಯು ಕುಟುಂಬ ಸೇರಲಿದ್ದಾರೆ. ದುರಂತವೆಂದರೆ, ತಾಯಿಯ ಬರುವಿಕೆಗಾಗಿ ಹುಡುಕಿ, ಕಾದಿದ್ದ ವೃದ್ಧೆಯ ಮಗ ಮೂರು ವರ್ಷದ ಹಿಂದೆ ಕೊನೆಯುಸಿರೆಳೆದಿದ್ದಾರೆ.
https://www.youtube.com/watch?v=Vxg2YSyLNxo