ಭಾರತ – ನೇಪಾಳದ ಗಡಿಯಲ್ಲಿ ಹೊಸದೊಂದು ತಲೆನೋವು ಶುರುವಾಗಿದೆ. ಇತ್ತೀಚೆಗಷ್ಟೇ ಗಡಿಯಲ್ಲಿನ ಕೆಲ ಪ್ರದೇಶಗಳನ್ನ ತಮ್ಮದೆಂದು ಹಕ್ಕು ಸಾಧಿಸಲು ಶುರು ಮಾಡಿರುವ ನೇಪಾಳ, ಇದೀಗ ಹೊಸ ತಲೆನೋವಿಗೆ ಕಾರಣವಾಗಿದೆ. ಕೊರೋನಾ ಕಾಯಿಲೆ ಬಂದು ಸತ್ತವರ ಮೃತದೇಹಗಳನ್ನು ಭಾರತದ ನೆಲದಲ್ಲಿ ಸಮಾಧಿ ಮಾಡುತ್ತಿದ್ದಾರೆ.
ಇಂತಹದೊಂದು ಪ್ರಕರಣ ಗಡಿ ಭಾಗವಾದ ಉತ್ತರ ಪ್ರದೇಶದ ಬರೇಲಿ ಬಳಿ ಬೆಳಕಿಗೆ ಬಂದಿದ್ದು, ದುಧುವಾ ಹುಲಿ ಸಂರಕ್ಷಿತ ಪ್ರದೇಶ(ಡಿಟಿಆರ್) ದಲ್ಲಿ ನೇಪಾಳಿಗರು ಹೆಣ ಹೂಳುವ ಕಾಯಕದಲ್ಲಿ ತೊಡಗಿದ್ದಾಗ ಸಿಕ್ಕಿಬಿದ್ದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಡಿಟಿಆರ್ ಕ್ಷೇತ್ರ ನಿರ್ದೇಶಕ ಸಂಜಯ್ ಪಾಠಕ್, ಗಸ್ತು ತಿರುಗುತ್ತಿರುವಾಗ ಒಂದಿಷ್ಟು ಮಂದಿ ಪಾರ್ಥಿವ ಶರೀರ ಹೂತು, ಸಮಾಧಿ ಮಾಡುತ್ತಿದ್ದರು. ವಿಚಾರಿಸಿದಾಗ ನಿಜಾಂಶ ಗೊತ್ತಾಗಿದೆ.
ತಕ್ಷಣವೇ ಸಶಸ್ತ್ರ ಸೀಮಾ ಬಲದ ಸಹಾಯದಿಂದ ಗೋರಿ ಕಟ್ಟುವ ಕಾಮಗಾರಿಯನ್ನು ನಿಲ್ಲಿಸಲಾಯಿತು. ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಕೊರೋನಾದಿಂದ ಸತ್ತಿದ್ದಾಗಿ ಒಪ್ಪಿಕೊಂಡಿದ್ದಾರೆ. ನಿರ್ಜನ ಪ್ರದೇಶದಲ್ಲಿ ಅಂತ್ಯಕ್ರಿಯೆ ಮಾಡಬೇಕೆಂಬ ಕಾರಣಕ್ಕೆ ಕಾಡಿಗೆ ತೆಗೆದುಕೊಂಡು ಬಂದೆವು. ಹೊರತೆಗೆದು ಹೊತ್ತೊಯ್ಯುವ ಭರವಸೆ ನೀಡಿದ ಮೇಲೆ, ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ, ಬುದ್ಧಿವಾದ ಹೇಳಿ ಬಿಟ್ಟು ಕಳುಹಿಸಲಾಯಿತು ಎನ್ನಲಾಗಿದೆ.