ರಾಜಸ್ಥಾನದ ಜಲೋರ್ ಜಿಲ್ಲೆಯ ಸಾಂಚೋರೆ ಪಟ್ಟಣದಲ್ಲಿ ಆಗಸದಿಂದ ಉಲ್ಕಾಶಿಲೆಯ ಚೂರೊಂದು ಧರೆಗುರುಳಿದೆ. 2.8 ಕೆಜಿ ತೂಕವಿರುವ ಈ ಉಲ್ಕಾಶಿಲೆಯ ಚೂರು ಭೂಮಿಗೆ ಅಪ್ಪಳಿಸಿದ ರಭಸಕ್ಕೆ ಒಂದು ಅಡಿಯಷ್ಟು ಕುಳಿ ನಿರ್ಮಾಣಗೊಂಡಿದೆ.
ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ದೊಡ್ಡ ಮಟ್ಟದ ಶಬ್ದವೊಂದು 2 ಕಿಮೀ ವ್ಯಾಸಕ್ಕೆ ಕೇಳಿಸಿದ ಕೂಡಲೇ ಸ್ಥಳೀಯರು ಪೊಲೀಸರಿಗೆ ಈ ವಿಚಾರ ಮುಟ್ಟಿಸಿದ್ದಾರೆ. ಅಲ್ಲಿನ ತಹಶೀಲ್ದಾರ್ ಭೂಪೇಂದ್ರ ಯಾದವ್ ಈ ಜಾಗಕ್ಕೆ ಭೇಟಿ ಕೊಟ್ಟು, ಏನಾಗಿದೆ ಎಂದು ಪರಿಶೀಲನೆ ನಡೆಸಿದ್ದಾರೆ.
ಈ ಶಿಲಾಚೂರು ಜರ್ಮೇನಿಯಂ, ಪ್ಲಾಟಿನಂ, ನಿಕ್ಕಲ್ ಹಾಗೂ ಕಬ್ಬಿಣಗಳಿಂದ ಮಾಡಲ್ಪಟ್ಟಿದೆ ಎಂದು ತಿಳಿದುಬಂದಿದೆ. ನೆಟ್ಟಿಗರು ಇದನ್ನು ಅನ್ಯಗ್ರಹ ಜೀವಿಗಳ ಮಾಸ್ಕ್ ಎಂದು ಹೇಳುತ್ತಿದ್ದಾರೆ.
ನೆಲಕ್ಕಪ್ಪಳಿಸಿದ ಸಂದರ್ಭದಲ್ಲಿ ಉಲ್ಕಾಶಿಲೆಯು ಬಹಳ ಬಿಸಿ ಇದ್ದ ಕಾರಣ, ಕೆಲ ಹೊತ್ತಿನ ಬಳಿಕ ಅದನ್ನು ಹತ್ತಿರದ ಪೊಲೀಸ್ ಠಾಣೆಗೆ ಕೊಂಡೊಯ್ಯಲಾಗಿದೆ. ಈ ಚೂರು ಬಿದ್ದ ಜಾಗದ ಸುತ್ತ ನಿಷೇಧಾಜ್ಞೆ ಹೇರಲಾಗಿದ್ದು, ಅಹಮದಾಬಾದ್ ಹಾಗೂ ಜೈಪುರಗಳಲ್ಲಿರುವ ಭಾರತೀಯ ಭೌಗೋಳಿಕ ಸರ್ವೇ ಕಾರ್ಯಾಲಯಗಳ ಸಿಬ್ಬಂದಿಯಿಂದ ಹೆಚ್ಚಿನ ಪರಿಶೀಲನೆ ನಡೆಯಬೇಕಿದೆ.