ಕೊರೊನಾ ಲಾಕ್ ಡೌನ್ ಕಾರಣಕ್ಕೆ ಮುಂದೂಡಿಕೆಯಾಗಿದ್ದ ಪಿಯುಸಿ ಇಂಗ್ಲೀಷ್ ವಿಷಯದ ಪರೀಕ್ಷೆಯನ್ನು ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಜೂನ್ 18ರ ಗುರುವಾರದಂದು ನಡೆಸಲಾಗಿತ್ತು.
ಇದರ ಮಧ್ಯೆ ಬೆಂಗಳೂರಿನ ಜಯನಗರ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಯೊಬ್ಬರು ಹೋಂ ಕ್ವಾರಂಟೈನ್ ನಲ್ಲಿದ್ದರೂ ಸಹ ಇದರ ಮಾಹಿತಿ ನೀಡದೆ ಪರೀಕ್ಷೆಗೆ ಹಾಜರಾಗಿದ್ದರೆಂದು ಹೇಳಲಾಗಿತ್ತು.
ಈ ವಿಚಾರ ಆತಂಕಕ್ಕೆ ಕಾರಣವಾಗಿದ್ದು, ಇದರ ಮಧ್ಯೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ನೆಮ್ಮದಿಯ ಸುದ್ದಿ ನೀಡಿದ್ದಾರೆ. ವಿದ್ಯಾರ್ಥಿನಿಯ ವರದಿಯಲ್ಲಿ ಕೊರೊನಾ ನೆಗೆಟಿವ್ ಎಂಬುದು ಸ್ಪಷ್ಟವಾಗಿ ದೃಢಪಟ್ಟಿದೆ ಎಂದು ಸಚಿವರು ತಿಳಿಸಿದ್ದಾರೆ.
ಹೀಗಾಗಿ ವಿದ್ಯಾರ್ಥಿನಿ ಪರೀಕ್ಷೆ ಬರೆದ ಕೊಠಡಿಯಲ್ಲಿದ್ದ ಇತರ ಪರೀಕ್ಷಾರ್ಥಿಗಳು ಭಯಪಡಬೇಕಾದ ಅಗತ್ಯವಿಲ್ಲ ಎಂದು ತಿಳಿಸಿರುವ ಸಚಿವ ಸುರೇಶ್ ಕುಮಾರ್, ಯಾವುದೇ ವಿದ್ಯಾರ್ಥಿ ಅಥವಾ ಸಿಬ್ಬಂದಿ ಕ್ವಾರಂಟೈನ್ ಗೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.