ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರೊಂದಿಗೆ ಚೀನಾ ಸೈನಿಕರು ಘರ್ಷಣೆಗಿಳಿದಿದ್ದು, ಈ ಸಂದರ್ಭದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಭಾರತೀಯ ಸೈನಿಕರ ಬಲಿದಾನವನ್ನು ವ್ಯರ್ಥವಾಗಲು ಬಿಡುವುದಿಲ್ಲವೆಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆ ನಿರಂತರ ಸಭೆ ನಡೆಸಿದ್ದರು.
ಇದಾದ ಬಳಿಕ ಪ್ರಧಾನಿ ನರೇಂದ್ರ ಮೋದಿ, ಸರ್ವಪಕ್ಷ ನಾಯಕರೊಂದಿಗೆ ಸಭೆ ನಡೆಸಿದ್ದು, ಈ ವೇಳೆ ಚೀನಾ ಸೈನಿಕರು ಭಾರತದ ಭೂ ಭಾಗವನ್ನು ಪ್ರವೇಶಿಸಿಲ್ಲವೆಂದು ತಿಳಿಸಿದ್ದರು. ಈ ವಿಚಾರ ತೀವ್ರ ಚರ್ಚೆಗೆ ಕಾರಣವಾಗಿತ್ತಲ್ಲದೇ ಚೀನಾ ಸೈನಿಕರು ಭಾರತದ ಗಡಿ ಪ್ರವೇಶಿಸಿಲ್ಲವೆಂದರೆ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದು ಹೇಗೆ ಎಂಬ ಪ್ರಶ್ನೆ ಕೇಳಿ ಬಂದಿತ್ತು.
ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲೂ ಈ ಕುರಿತು ಪರ – ವಿರೋಧದ ಚರ್ಚೆ ನಡೆದಿದ್ದು, ಇದೀಗ ಅಧಿಕಾರಿಗಳು ಪ್ರಧಾನಿ ಹೇಳಿಕೆ ಕುರಿತಂತೆ ಸ್ಪಷ್ಟನೆ ನೀಡಿದ್ದಾರೆ. ಉದ್ದೇಶಪೂರ್ವಕವಾಗಿಯೇ ಹೇಳಿಕೆಯನ್ನು ತಮಗೆ ಬೇಕಾದಂತೆ ಕೆಲವರು ಅರ್ಥೈಸುತ್ತಿದ್ದಾರೆಂದು ತಿಳಿಸಲಾಗಿದ್ದು, ಚೀನಾ ಸೈನಿಕರು ಭಾರತದ ಗಡಿ ಪ್ರವೇಶಿಸಲು ಮುಂದಾದ ವೇಳೆ ನಮ್ಮ ವೀರ ಯೋಧರು ಅವರನ್ನು ಹಿಮ್ಮೆಟ್ಟಿಸಿದ್ದಾರೆ ಎಂದು ತಿಳಿಸಲಾಗಿದೆ.
ಜೂನ್ 15 ರಂದು ಲೈನ್ ಆಫ್ ಆಕ್ಚುಯುಲ್ ಕಂಟ್ರೋಲ್ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಚೀನಾ ಸೈನಿಕರು ಜಮಾವಣೆಗೊಂಡು ಡೇರೆ ನಿರ್ಮಾಣ ಸೇರಿದಂತೆ ಕೆಲವೊಂದು ಕಾರ್ಯ ಕೈಗೊಂಡ ವೇಳೆ ಭಾರತೀಯ ಯೋಧರು ಅವರನ್ನು ಅಲ್ಲಿಂದ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂದರ್ಭದಲ್ಲಿ ನಡೆದ ಚಕಮಕಿಯಲ್ಲಿ 20 ಮಂದಿ ವೀರ ಯೋಧರು ಹುತಾತ್ಮರಾಗಬೇಕಾಯಿತು ಎಂದು ಹೇಳಲಾಗಿದೆ.