ಕೋಕೊನಟ್ ರೋಟಿ ಸವಿದಿದ್ದೀರಾ…? ಇದನ್ನು ಮಾಡುವುದು ತುಂಬಾ ಸುಲಭ. ಹಾಗೇ ಇದಕ್ಕೆ ಬೇಕಾಗಿರುವ ಸಾಮಾಗ್ರಿಗಳು ಕೂಡ ತುಂಬಾ ಕಡಿಮೆ. ಥಟ್ಟಂತ ಮಾಡಿಬಿಡಹುದು ಈ ರೋಟಿಯನ್ನು. ಜತೆಗೆ ರುಚಿಕರವಾಗಿ ಕೂಡ ಇರುತ್ತದೆ. ಒಮ್ಮೆ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು:
ಮೈದಾ -3 ಕಪ್, ನೀರು-1 ಕಪ್, 1ಕಪ್- ತೆಂಗಿನಕಾಯಿ ತುರಿ, 1 ಟೇಬಲ್ ಸ್ಪೂನ್- ಎಣ್ಣೆ, ಹಸಿಮೆಣಸು-4, ¼ ಕಪ್- ಈರುಳ್ಳಿ ಸಣ್ಣಗೆ ಕತ್ತರಿಸಿದ್ದು, ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿಧಾನ:
ಮೊದಲಿಗೆ ಒಂದು ದೊಡ್ಡ ಬೌಲ್ ಗೆ ಮೈದಾ ಹಿಟ್ಟು, ಉಪ್ಪು, ತೆಂಗಿನಕಾಯಿ ತುರಿ, ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಸ್ವಲ್ಪ ಸ್ವಲ್ಪ ನೀರು ಸೇರಿಸಿ ಮುದ್ದೆ ರೀತಿ ನಾದಿ. ನಂತರ ಇದಕ್ಕೆ ಹಸಿಮೆಣಸು, ಈರುಳ್ಳಿ ಸೇರಿಸಿ ಮತ್ತೊಮ್ಮೆ ಮಿಕ್ಸ್ ಮಾಡಿಕೊಂಡು ಹಿಟ್ಟಿನಿಂದ ಹದ ಗಾತ್ರದ ಉಂಡೆ ಮಾಡಿಕೊಳ್ಳಿ. ನಂತರ ಒಂದು ತವಾವನ್ನು ಗ್ಯಾಸ್ ಮೇಲೆ ಇಡಿ. ಈ ಉಂಡೆ ತೆಗೆದುಕೊಂಡು ಕೈಯಿಂದ ದಪ್ಪಕ್ಕೆ ತಟ್ಟಿಕೊಳ್ಳಿ. ತುಂಬಾ ತೆಳುವಾಗಿ ಬೇಡ. ಇದನ್ನು ಕಾದ ತವಾದ ಮೇಲೆ ಹಾಕಿ ಹದ ಉರಿಯಲ್ಲಿ ಎರಡೂ ಕಡೆ ಚೆನ್ನಾಗಿ ಬೇಯಿಸಿಕೊಳ್ಳಿ.