ಕೊರೊನಾ ಲಾಕ್ ಡೌನ್ ಕಾರಣಕ್ಕೆ ಮುಂದೂಡಿಕೆಯಾಗಿದ್ದ ದ್ವಿತೀಯ ಪಿಯುಸಿ ಇಂಗ್ಲೀಷ್ ವಿಷಯದ ಪರೀಕ್ಷೆಯನ್ನು ಜೂನ್ 18 ರ ಗುರುವಾರ ನಡೆಸಲಾಗಿತ್ತು. ಪರೀಕ್ಷೆ ನಡೆಸಲು ಪರ – ವಿರೋಧದ ಅಭಿಪ್ರಾಯಗಳು ಕೇಳಿ ಬಂದರೂ ಸಹ ಸರ್ಕಾರ ಪರೀಕ್ಷೆ ನಡೆಸುವ ತೀರ್ಮಾನ ಕೈಗೊಂಡಿತ್ತು.
ಇದೀಗ ಪರೀಕ್ಷೆ ಮುಗಿದ ಮರುದಿನವೇ ಸ್ಪೋಟಕ ಮಾಹಿತಿಯೊಂದು ಬಹಿರಂಗವಾಗಿದ್ದು, ಬೆಂಗಳೂರಿನ ಜಯನಗರ 4 ನೇ ಬ್ಲಾಕ್ ನಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಯೊಬ್ಬರಿಗೆ ಕೊರೊನಾ ಸೋಂಕು ಇರುವುದು ಇಂದು ದೃಢಪಟ್ಟಿದೆ.
ಈ ವಿದ್ಯಾರ್ಥಿನಿ ಹೋಂ ಕ್ವಾರಂಟೈನ್ ನಲ್ಲಿದ್ದರೂ ಸಹ ಅಧಿಕಾರಿಗಳ ಕಣ್ತಪ್ಪಿಸಿ ಪರೀಕ್ಷೆ ಬರೆದಿದ್ದರೆನ್ನಲಾಗಿದೆ. ವಿದ್ಯಾರ್ಥಿನಿ ಪರೀಕ್ಷೆ ಬರೆದ ಕೊಠಡಿಯಲ್ಲಿ ಇನ್ನೂ 14 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದೀಗ ಅಧಿಕಾರಿಗಳು ಈ ವಿದ್ಯಾರ್ಥಿಗಳ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ.