ಎರಡು ದಿನದ ಹಿಂದೆ ಚೀನಾ ಗಡಿಯಲ್ಲಿ ನಡೆದ ಯೋಧರ ಮಲ್ಲಯುದ್ಧದಲ್ಲಿ ತಮ್ಮ ಮನೆಯ ಮಗ ಮೃತಪಟ್ಟನೆಂದು ಅಳುತ್ತಿದ್ದ ಮನೆಯಲ್ಲಿ ಏಕಾಏಕಿ ಖುಷಿ ಹಾಗೂ ನೆಮ್ಮದಿಯ ವಾತಾವರಣ ನಿರ್ಮಾಣವಾಗಿತ್ತು. ಕಾರಣವೇನೆಂದು ಹುಡುಕಿದರೆ, ಆ ಯೋಧ ಮೃತಪಟ್ಟೇ ಇರಲಿಲ್ಲವಂತೆ.
ಹೌದು, ಬಿಹಾರದ ಸುನಿಲ್ ಎನ್ನುವ ಯೋಧನ ಮನೆಯಲ್ಲಿ ಈ ರೀತಿಯ ಘಟನೆ ನಡೆದಿದೆ. ಬುಧವಾರ ರಾತ್ರಿ ಇಡೀ ಮಗನ ಅಗಲಿಕೆಗೆ ಅಳುತ್ತಾ ಕೊರಗಿದ್ದ ಕುಟುಂಬಕ್ಕೆ, ಗುರುವಾರ ಮುಂಜಾನೆ ಸ್ವತಃ ಸುನೀಲ್ ಕರೆ ಮಾಡಿ, “ನಾನು ಬದುಕಿದ್ದೇನೆʼ ಎಂದು ಹೇಳಿದಾಗ ಆದ ಖುಷಿ ವರ್ಣಿಸಲು ಸಾಧ್ಯವಿಲ್ಲ. ಸೇನೆಯಲ್ಲಿ ಬಿಹಾರ್ ರೆಜಿಮೆಂಟ್‌ನಲ್ಲಿ ಹುತಾತ್ಮರಾದ ಇನ್ನೊಬ್ಬ ಸುನೀಲ್ ನನ್ನು ಈತನೆಂದು ಸೇನಾಧಿಕಾರಿಗಳು ತಪ್ಪಾಗಿ ಅರ್ಥೈಸಿಕೊಂಡಿದ್ದೇ ಈ ಮಹಾ ಎಡವಟ್ಟಿಗೆ ಕಾರಣವೆಂದು ತಿಳಿದುಬಂದಿದೆ.
ಬುಧವಾರ ಬೆಳಗ್ಗೆ ನಡೆದ ಘಟನೆಯಲ್ಲಿ ಸುನೀಲ್ ಮೃತಪಟ್ಟಿದ್ದಾರೆ ಎನ್ನುವ ಸಂದೇಶ ಬಂದಿದೆ. ಇದನ್ನು ಕೇಳಿ ಆಘಾತಕ್ಕೊಳಗಾದ ಕುಟುಂಬ ಸದಸ್ಯರು ಮುಂದೇನು ಮಾಡಬೇಕು ಎನ್ನುವ ಆತಂಕದಲ್ಲಿಯೇ ಕೂತಿದ್ದರು. ಆದರೆ ಮಧ್ಯಾಹ್ನದ ವೇಳೆಗೆ ಸುನೀಲ್ ಎನ್ನುವ ಇಬ್ಬರ ನಡುವಿನ ಗೊಂದಲದಿಂದ ಈ ರೀತಿಯಾಗಿದೆ. ನಿಮ್ಮ ಮನೆಯ ಸುನೀಲ್ ಬದುಕಿದ್ದಾರೆ ಎಂದು ಸೇನಾಧಿಕಾರಿಗಳು ಸುನೀಲ್ ಅವರ ಸಹೋದರ ಅನಿಲ್‌ಗೆ ಕರೆ ಮಾಡಿದರೂ, ಅದನ್ನು ಕುಟುಂಬ ಸದಸ್ಯರು ನಂಬಿರಲಿಲ್ಲ. ಬಳಿಕ ಗುರುವಾರ ಬೆಳಗ್ಗೆ ಸ್ವತಃ ಸುನೀಲ್ ಅವರೇ ಕರೆ ಮಾಡಿ ಕುಟುಂಬ ಸದಸ್ಯರೊಂದಿಗೆ ಮಾತನಾಡಿದ ಬಳಿಕ ನಿರಾಳರಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸುನೀಲ್ ಪತ್ನಿ ಮೇನಕಾ ಮಾತನಾಡಿದ್ದು, ಪತಿಯ ಧ್ವನಿ ಕೇಳುವ ತನಕ ಕುಟುಂಬದವರಿಗೆ ನೆಮ್ಮದಿಯಿರಲಿಲ್ಲ. ಅವರ ಧ್ವನಿ ಕೇಳುತ್ತಿದ್ದಂತೆ, ಎಲ್ಲಿಲ್ಲದ ಖುಷಿಯಾಯಿತು. ಅದನ್ನು ವರ್ಣಿಸಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.