ನವದೆಹಲಿ: ಲೈನ್ ಆಫ್ ಅಕ್ಚುಯಲ್ ಕಂಟ್ರೋಲ್ ನಲ್ಲಿ ಭಾರತ ಮತ್ತು ಚೀನಾ ಸೈನಿಕರು ಜಮಾವಣೆಗೊಂಡಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಇದೇ ವೇಳೆ ಚೀನಾಕ್ಕೆ ಬಿಸಿ ಮುಟ್ಟಿಸಲು ಭಾರತ ಮುಂದಾಗಿದ್ದು, ಚೀನಾದಿಂದ ಆಮದು ಮಾಡಿಕೊಳ್ಳುವ ಹಲವಾರು ಉತ್ಪನ್ನಗಳ ಮೇಲೆ ಕಸ್ಟಮ್ಸ್ ಸುಂಕವನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ.
ಈ ಕುರಿತಾಗಿ ಹಣಕಾಸು ಸಚಿವಾಲಯ ಮತ್ತು ವಾಣಿಜ್ಯ ಸಚಿವಾಲಯದ ಅಧಿಕಾರಿಗಳ ನಡುವೆ ಮಹತ್ವದ ಚರ್ಚೆ ನಡೆದಿದೆ. ಈಗಾಗಲೇ ಭಾರತೀಯ ರೈಲ್ವೆ ಚೈನಾ ಕಂಪನಿಯೊಂದಿಗಿನ ಒಪ್ಪಂದವನ್ನು ಮುರಿದುಕೊಂಡಿದ್ದು, ಬಿಎಸ್ಎನ್ಎಲ್ 4ಜಿ ಅಭಿವೃದ್ಧಿ ಕಾಮಗಾರಿಗಳಿಗೆ ಚೀನಾ ಉಪಕರಣ ಬಳಸದಂತೆ ಸೂಚನೆ ನೀಡಲಾಗಿದೆ. ಇದರ ಮುಂದುವರೆದ ಭಾಗವಾಗಿ ಚೀನಾದಿಂದ ಆಮದು ಮಾಡಿಕೊಳ್ಳುವ ಹಲವಾರು ಉತ್ಪನ್ನಗಳ ಮೇಲೆ ಕಸ್ಟಮ್ಸ್ ಸುಂಕ ಹೆಚ್ಚಳ ಮಾಡಲು ವಾಣಿಜ್ಯ ಸಚಿವಾಲಯ ಮತ್ತು ಹಣಕಾಸು ಸಚಿವಾಲಯದ ಅಧಿಕಾರಿಗಳ ನಡುವೆ ಸಮಾಲೋಚನೆ ನಡೆದಿದೆ.
ಇನ್ನೂ ಯಾವುದನ್ನು ಅಂತಿಮಗೊಳಿಸಿಲ್ಲವಾದರೂ ಅನಿವಾರ್ಯವಲ್ಲದ ವಸ್ತುಗಳ ಆಮದು ಶೇಕಡ 14 ರಷ್ಟು ಕಡಿಮೆ ಮಾಡಲು ಸರ್ಕಾರ ಯೋಚಿಸುತ್ತಿದೆ ಎಂದು ಹೇಳಲಾಗಿದೆ. ಕೈಗಡಿಯಾರ, ಎಲೆಕ್ಟ್ರಾನಿಕ್, ಪೀಠೋಪಕರಣ, ಆಟಿಕೆ, ಸಂಗೀತ ಉಪಕರಣ, ಕ್ರೀಡಾ ಸಾಮಗ್ರಿ, ಹಾಸಿಗೆ, ಪ್ಲಾಸ್ಟಿಕ್ ವಸ್ತುಗಳು, ಕಬ್ಬಿಣ ಮತ್ತು ಉಕ್ಕಿನ ವಸ್ತುಗಳು ಸೇರಿದಂತೆ ಹಲವು ವಸ್ತುಗಳ ಮೇಲಿನ ಕಸ್ಟಮ್ಸ್ ಸುಂಕ ಹೆಚ್ಚಳ ಮಾಡಬಹುದು ಎಂದು ಹೇಳಲಾಗಿದೆ.
ದೇಶಾದ್ಯಂತ ಚೀನಾ ವಸ್ತುಗಳ ಬಹಿಷ್ಕಾರಕ್ಕೆ ಅಭಿಯಾನ ನಡೆದಿದೆ. ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಸುಮಾರು 3000 ವಸ್ತುಗಳ ಪ್ರಾಥಮಿಕ ಪಟ್ಟಿಯನ್ನು ಸಿದ್ಧಪಡಿಸಿದ್ದು, ಪರ್ಯಾಯ ಕ್ರಮಗಳ ಬಗ್ಗೆ ಚಿಂತನೆ ನಡೆಸಿದೆ.