ಏಡ್ಸ್ ಗೆ ಲಸಿಕೆ ಕಂಡು ಹಿಡಿದಿದ್ದ ವಿಜ್ಞಾನಿಗಳಿಂದಲೇ ಕೊರೋನಾ ವೈರಸ್ ಗೂ ಲಸಿಕೆ ಶೀಘ್ರವೇ ಸಿದ್ಧವಾಗಲಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದ್ದಾರೆ.
ಪೊಲೀಸ್ ಸುಧಾರಣಾ ಕಾರ್ಯನಿರ್ವಹಣೆ ಆದೇಶಕ್ಕೆ ಸಹಿ ಹಾಕಿದ ನಂತರ ಮಾತನಾಡಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕೊರೋನಾ ಲಸಿಕೆಯ ಬಗ್ಗೆ ಮಾತನಾಡುತ್ತಿದ್ದವವರು ಈಗ ಏಡ್ಸ್ ಲಸಿಕೆಯ ಬಗ್ಗೆಯೂ ಚರ್ಚೆ ಮಾಡಲಾರಂಭಿಸಿದ್ದಾರೆ. ಟ್ರಂಪ್ ಹೇಳಿದ್ದು ನಿಜ ಇರಬಹುದು ಎಂದು ಜನ ಅಂದುಕೊಂಡಿದ್ದಾರೆ.
ಆದರೆ, ಅಸಲಿ ಸಂಗತಿ ಎಂದರೆ ಏಡ್ಸ್ ನ್ನು ಸಂಪೂರ್ಣ ಗುಣ ಮಾಡಬಲ್ಲ ಔಷಧಿ ಸಂಶೋಧನೆಯಾಗಿಲ್ಲ. ಏಡ್ಸ್ ಇದ್ದವರು ಕೆಲ ಔಷಧಿ ಪಡೆದು ಹೆಚ್ಚು ದಿನ ಜೀವಿಸುವಂತೆ ಮಾಡುವ ವೈದ್ಯಕೀಯ ಪದ್ಧತಿ ಮಾತ್ರ ಸದ್ಯಕ್ಕಿದೆ.
ಏಡ್ಸ್ ನಿರೋಧಕ ಸಾಕಷ್ಟು ಔಷಧಿಗಳು ಇವೆ. ಅವನ್ನು ಪಡೆದ ನಂತರವೂ ಲೈಂಗಿಕ ಕ್ರಿಯೆಯಿಂದ ಎಚ್ಐವಿ ಹರಡಬಹುದು. ಅದನ್ನು ಸಂಪೂರ್ಣ ಗುಣಪಡಿಸಬಹುದಾದ ಅಥವಾ ತಡೆಯಬಹುದಾದ ಯಾವುದೇ ಔಷಧಿ ಅಥವಾ ರೋಗ ನಿರೋಧಕ ಇಲ್ಲ ಎಂದು ಅಮೆರಿಕಾದ ಆರೋಗ್ಯ ಇಲಾಖೆ ತಿಳಿಸಿದೆ.
ಅಮೆರಿಕಾದ ಕನಿಷ್ಠ 1.1 ಮಿಲಿಯನ್ ಜನ ಎಚ್ಐವಿಯೊಂದಿಗೆ ಜೀವಿಸುತ್ತಿದ್ದಾರೆ. ಅದರಲ್ಲಿ ಶೇ. 14 ಜನರಿಗೆ ತಾವು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂಬ ಅರಿವೂ ಇಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.