ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಈ ಹಿಂದೆ ಕಟ್ಟುನಿಟ್ಟಾದ ಲಾಕ್ ಡೌನ್ ಜಾರಿಗೊಳಿಸಿದ್ದ ಪರಿಣಾಮ ವ್ಯಾಪಾರ ವಹಿವಾಟುಗಳು ಸಂಪೂರ್ಣವಾಗಿ ಬಂದ್ ಆಗಿದ್ದವು. ಹೀಗಾಗಿ ಸಾರ್ವಜನಿಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು.
ಈ ಸಂದರ್ಭದಲ್ಲಿ ಸಾಲ ಪಡೆದ ಗ್ರಾಹಕರ ನೆರವಿಗೆ ಧಾವಿಸಿದ್ದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಕಂತು ಪಾವತಿ ಅವಧಿಯನ್ನು ಮುಂದೂಡಿಕೆ ಮಾಡಿತ್ತು. ಇದೀಗ ಲಾಕ್ಡೌನ್ ಸಡಿಲಿಕೆ ಆಗಿರುವ ಕಾರಣ ವ್ಯಾಪಾರ – ವಹಿವಾಟುಗಳು ನಿಧಾನಕ್ಕೆ ಆರಂಭವಾಗುತ್ತಿವೆ. ಇದರ ಮಧ್ಯೆ ಬ್ಯಾಂಕುಗಳು ಮುಂದೂಡಿಕೆಯಾಗಿದ್ದ ಇಎಂಐ ಮೇಲೆ ಬಡ್ಡಿ ವಿಧಿಸುತ್ತಿವೆ. ಇದು ಗ್ರಾಹಕರಿಗೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ.
ಮುಂದೂಡಿಕೆಯಾಗಿದ್ದ ಇಎಂಐ ಮೇಲೆ ಬಡ್ಡಿ ವಿಧಿಸುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿರುವ ಮಧ್ಯೆ ಸುಪ್ರೀಂ ಕೋರ್ಟ್ ಸಹ ಬ್ಯಾಂಕುಗಳ ಕ್ರಮಕ್ಕೆ ಆಕ್ಷೇಪಿಸಿದೆ. ಈ ಅವಧಿಯಲ್ಲಿ ಬಡ್ಡಿ ವಿನಾಯಿತಿ ನೀಡದಿದ್ದರೆ ಇಂತಹ ಸೌಲಭ್ಯ ನೀಡಿಯೂ ಪ್ರಯೋಜನವೇನು ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದ್ದು, ಈ ವಿಷಯದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ಸೂಚಿಸಿದೆ.