ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ದಿನೇ ದಿನೇ ವ್ಯಾಪಕವಾಗುತ್ತಿದೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಆರ್ಭಟಿಸಲಿದೆ ಎನ್ನಲಾಗುತ್ತಿದ್ದು, ಹೀಗಾಗಿ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಲ್ಲೂ ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಇದರ ಮಧ್ಯೆ ಕರ್ನಾಟಕ ಬ್ಯಾಂಕ್, ಸಾರ್ವಜನಿಕರಿಗೆ ಆರೋಗ್ಯ ರಕ್ಷಾ ಕವಚ ನೀಡುವ ವಿಶೇಷ ಕೊರೊನಾ ವಿಮಾ ಯೋಜನೆಯನ್ನು ಜಾರಿಗೊಳಿಸಿದ್ದು, ಎಲ್ಲ ತೆರಿಗೆಗಳು ಸೇರಿ ಕೇವಲ 399 ರೂ. ಪಾವತಿಸುವ ಮೂಲಕ ಈ ವಿಮೆಯನ್ನು ಪಡೆಯಬಹುದಾಗಿದೆ.
ಯುನಿವರ್ಸಲ್ ಸೋಂಪೊ ಜನರಲ್ ಇನ್ಸೂರೆನ್ಸ್ ಸಂಸ್ಥೆ ಸಹಯೋಗದಲ್ಲಿ ಈ ವಿಮಾ ಯೋಜನೆಯನ್ನು ಆರಂಭಿಸಲಾಗಿದ್ದು, ವಿಮೆಯ ಅವಧಿ 120 ದಿನಗಳಾಗಿರುತ್ತವೆ. ವಿಮಾದಾರಿಗೆ 3 ಲಕ್ಷ ರೂಪಾಯಿಗಳವರೆಗೆ ಆಸ್ಪತ್ರೆ ಖರ್ಚು ಹಾಗೂ ಹೊರರೋಗಿಯಾಗಿ ಚಿಕಿತ್ಸೆ ಪಡೆದಲ್ಲಿ 3 ಸಾವಿರ ರೂಪಾಯಿಗಳವರೆಗಿನ ಔಷಧ ಖರ್ಚು ಅಥವಾ 14ದಿನಗಳ ಕ್ವಾರಂಟೈನ್ ಗೆ ಒಳಪಟ್ಟಲ್ಲಿ ದಿನಕ್ಕೆ 1000 ರೂ. ವರೆಗೆ ವೆಚ್ಚ ಭರಿಸಲು ಅವಕಾಶವಿರಲಿದೆ.
18 ರಿಂದ 65 ವರ್ಷ ವಯೋಮಿತಿಯ ಬ್ಯಾಂಕ್ ಗ್ರಾಹಕರು ವಿಮೆ ಸೌಲಭ್ಯವನ್ನು ಪಡೆಯಬಹುದಾಗಿದ್ದು, ಗ್ರಾಹಕರಲ್ಲದವರು ಗ್ರಾಹಕರಾಗಿ ವಿಮಾ ಕಂತು ಪಾವತಿಸಿ ಈ ಸೌಲಭ್ಯವನ್ನು ಪಡೆಯಬಹುದಾಗಿದೆ.