ಕೊರೊನಾ ಲಾಕ್ಡೌನ್ ಅನಿರೀಕ್ಷಿತ. ಯಾರು ಇಂಥ ಪರಿಸ್ಥಿತಿ ಬರುತ್ತದೆ ಎಂದು ಊಹಿಸಿರಲಿಲ್ಲ. ಜನರಷ್ಟೇ ಅಲ್ಲದೇ ಪ್ರಾಣಿಗಳು ಆಹಾರವಿಲ್ಲದೇ ಪರದಾಡಬೇಕಾಯಿತು.
ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಸಂಕಷ್ಟದಲ್ಲಿರುವವರಿಗೆ ಆಹಾರ, ದಿನಸಿ ಕಿಟ್ ವಿತರಿಸಿದವು. ಕೆಲವರು ಪ್ರಾಣಿಗಳಿಗೂ ಆಹಾರ ನೀಡಿದರು. ಇಲ್ಲೊಬ್ಬ ವ್ಯಕ್ತಿ 700 ನಾಯಿಗಳಿಗೆ ಆಹಾರ ನೀಡಿದ್ದಾನೆ. ನೋಯ್ಡಾದ ವಿದಿತ್ ಶರ್ಮಾ 700 ನಾಯಿಗಳಿಗೆ ಮತ್ತು 45 ಮರಿಗಳಿಗೆ ನಗರದ ವಿವಿಧ ಪ್ರದೇಶಗಳಿಗೆ ತೆರಳಿ ಆಹಾರ ನೀಡಿದ್ದಾರೆ.
ಈ ಚಟುವಟಿಕೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಶರ್ಮಾ, ನಾನು ನಾಲ್ಕು ವರ್ಷಗಳಿಂದಲೂ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದೇನೆ. ಲಾಕ್ ಡೌನ್ ವೇಳೆ ನನ್ನ ಕಚೇರಿ ಮುಚ್ಚಲಾಗಿತ್ತು, ಅದರಿಂದ ನಾನು ಹೆಚ್ಚಿನ ನಾಯಿಗಳಿಗೆ ಆಹಾರ ವಿತರಿಸಲು ಆರಂಭಿಸಿದೆ ಎಂದಿದ್ದಾರೆ.
100 ಕೆಜಿ ಅನ್ನ, ಸೋಯಾಬಿನ್, 200 ಮೊಟ್ಟೆ ಬೆರೆಸಿ ಅದನ್ನು ನಾಯಿಗೆ ದಿನಕ್ಕೆ ಎರಡು ಬಾರಿ ನೀಡಿದ್ದರಂತೆ. ಹಾಗೆ ಆಹಾರ ಸಾಗಿಸಲು ರಿಕ್ಷಾ ಎಳೆಯುವವರನ್ನು ನೇಮಿಸಿಕೊಂಡಿದ್ದರು.
ಇವರ ನಾಯಿ ಪ್ರೀತಿ ಇಷ್ಟಕ್ಕೆ ನಿಲ್ಲುವುದಿಲ್ಲ. ರಾತ್ರಿವೇಳೆ ವಾಹನಗಳಿಗೆ ನಾಯಿಗಳು ಸಿಲುಕಿ ಅಪಘಾತವಾಗಬಾರದು ಎಂದು ನಾಯಿಗಳಿಗೆ ರೇಡಿಯಮ್ ಕಾಲರ್ ಗಳನ್ನು ಕಟ್ಟಲು ಆರಂಭಿಸಿದ್ದಾರೆ. ಈಗಾಗಲೇ 60 ಕಾಲರ್ ಗಳನ್ನು ಖರೀದಿಸಿದ್ದು, 1000 ಕಾಲರ್ ಖರೀದಿಸಲು ಯೋಜಿಸಿದ್ದಾರೆ. ಪ್ರತಿ ಕಾಲರ್ ಗೆ 360 ರೂ. ವೆಚ್ಚವಾಗಲಿದೆ.