ಪ್ರತಿಷ್ಠಿತ ನಾಗರಿಕ ಸೇವಾ ಪರೀಕ್ಷೆಗಳನ್ನು ಪಾಸ್ ಮಾಡಿದ ಬುಡಕಟ್ಟು ಜನಾಂಗದ ಮೊದಲ ಮಹಿಳೆ ಶ್ರೀಧನ್ಯಾ ಸುರೇಶ್ ಇದೇ ಗುರುವಾರ ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಕಲೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.
ವಯನಾಡಿನವರಾದ 26 ವರ್ಷದ ಶ್ರೀಧನ್ಯಾ, ತಮ್ಮ ಆಡಳಿತ ತರಬೇತಿ ಶಿಕ್ಷಣವನ್ನು ಮಸ್ಸೂರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿಯಲ್ಲಿ ಪೂರೈಸಿ ಮರಳಿದ್ದು, ತಿರುವನಂತಪುರಂನಲ್ಲಿ ಎರಡು ವಾರಗಳ ಕ್ವಾರಂಟೈನ್ ಮುಗಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ತಮಗೆ ಸ್ಪೂರ್ತಿ ತುಂಬಿದ ಅಧಿಕಾರಿ, ಜಿಲ್ಲಾ ಕಲೆಕ್ಟರ್ ಸಾಂಬಶಿವ ರಾವ್ ಅವರ ಕೈಕೆಳಗೆ ತಮ್ಮ ಪ್ರೊಬೇಷನ್ ಅನ್ನು ಶುರು ಮಾಡಿಕೊಂಡಿದ್ದಾರೆ ಶ್ರೀಧನ್ಯಾ. ಅವರ ಈ ಸಾಧನೆಗೆ ಟ್ವಿಟರ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.