ಡ್ರೋನ್ ಕ್ಯಾಮರಾ ಬಳಸಿ ಸಮುದ್ರದಲ್ಲಿ ಆಮೆಗಳ ಖಚಿತ ಲೆಕ್ಕ ಹಾಕುವ ವಿಧಾನವನ್ನು ಕ್ವೀನ್ಸ್ಲ್ಯಾಂಡ್ ಸರ್ಕಾರದ ಪರಿಸರ ಮತ್ತು ವಿಜ್ಞಾನ ಇಲಾಖೆ ತಜ್ಞರು ಕಂಡುಕೊಂಡಿದ್ದಾರೆ.
ಅವರು ಬಿಡುಗಡೆ ಮಾಡಿದ ವಿಡಿಯೋದಲ್ಲಿ ಸಾವಿರಾರು ಆಮೆಗಳು ತೇಲಿ ಬರುತ್ತಿರುವುದು ಕಾಣಿಸುತ್ತದೆ.
ಈ ಮೊದಲು ಆಮೆಗಳು ತೀರಕ್ಕೆ ಮೊಟ್ಟೆಯಿಡಲು ಬರುತ್ತಿದ್ದಂತೆ ಅವಕ್ಕೆ ಬಿಳಿ ಬಣ್ಣ ಬಳಿದು ಅವುಗಳನ್ನು ಲೆಕ್ಕ ಹಾಕಲಾಗುತ್ತಿತ್ತು. ಆದರೂ ಎಷ್ಟು ಆಮೆಗಳಿವೆ ಎಂಬುದನ್ನು ನಿಖರವಾಗಿ ಲೆಕ್ಕ ಹಾಕಲು ಆಗುತ್ತಿರಲಿಲ್ಲ. ಈಗ ಡ್ರೋಣ್ ಬಳಕೆ ಮೂಲಕ ನಿಖರ ಲೆಕ್ಕ ಹಾಕುವ ವಿಧಾನವನ್ನು ಕಳೆದ ಡಿಸೆಂಬರ್ ನಲ್ಲೇ ಕಂಡು ಹಿಡಿಯಲಾಗಿದ್ದು, “ಪ್ಲೋಸ್ ಒನ್” ಎಂಬ ವೈಜ್ಞಾನಿಕ ಜರ್ನಲ್ ನಲ್ಲಿ ಪ್ರಕಟಿಸಲಾಗಿದೆ.
“ದೋಣಿಯಲ್ಲಿ ಕುಳಿತು ಉಕ್ಕುವ ಸಮುದ್ರದಲ್ಲಿ ತೇಲುವ ಆಮೆಗಳಿಗೆ ಬಣ್ಣ ಬಳಿಯುವುದು ಕಷ್ಟದ ಕೆಲಸವಾಗಿತ್ತು. ಅಪಾಯಕಾರಿಯೂ ಆಗಿತ್ತು. ಈಗ ಡ್ರೋಣ್ ನಿಂದ ಈ ಕೆಲಸ ಸುಲಭ. ಡೇಟಾವನ್ನು ಸಂಗ್ರಹಿಸಿಡಬಹುದು. ನಿಖರವಾದ ಲೆಕ್ಕ ಪಡೆಯಬಹುದು” ಎಂದು ಹಿರಿಯಸಂಶೋಧನಾ ವಿಜ್ಞಾನಿ ಹಾಗೂ ಜರ್ನಲ್ ನ ಪ್ರಮುಖ ಲೇಖಕ ಡಾ.ಅಂಡ್ರೇವ್ ಡಸ್ಟನ್ ಸಿಎನ್ಎನ್ ಚಾನಲ್ ಗೆ ಹೇಳಿದ್ದಾರೆ. ಹಸಿರು ಆಮೆಗಳು ಉಷ್ಣ ವಲಯ ಹಾಗೂ ಉಪ ಉಷ್ಣ ವಲಯದ ಸಮುದ್ರದಲ್ಲಿ ಕಾಣಿಸುತ್ತವೆ. ಮೊಟ್ಟೆ ಇಡುವ ಸಲುವಾಗಿ ಸಾಕಷ್ಟು ದೂರ ಪ್ರಯಾಣಿಸುತ್ತವೆ.