ಬೆಂಗಳೂರು: ಕೇಂದ್ರ ಸರ್ಕಾರದ ಸಹಯೋಗದ ಭಾರತ್ ನೆಟ್ ಯೋಜನೆಯನ್ನು ಚುರುಕುಗೊಳಿಸುವ ಮೂಲಕ ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಗ್ರಾಮ ಪಂಚಾಯಿತಿಗಳಿಗೆ ನೀಡಿರುವ ಇಂಟರ್ನೆಟ್ ಸಂಪರ್ಕದ ಗುಣಮಟ್ಟ ಸುಧಾರಣೆಗೆ ಪ್ರಯತ್ನಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.
ಗ್ರಾಮೀಣ ಭಾಗಗಳಲ್ಲಿ ಇಂಟರ್ನೆಟ್ ಸಂಪರ್ಕ ಸುಧಾರಿಸುವ ಸಂಬಂಧ ಅಧಿಕಾರಿಗಳು, ವಿವಿಧ ಏಜೆನ್ಸಿ ಮುಖ್ಯಸ್ಥರ ಜತೆ ಮಂಗಳವಾರ ವೀಡಿಯೋ ಕಾನ್ಫರೆನ್ಸ್ ನಡೆಸಿದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು.
ಕರ್ನಾಟಕದಲ್ಲಿ ಭಾರತ್ ನೆಟ್ ಯೋಜನೆ ಪ್ರಗತಿ ವರದಿ ಹಾಗೂ ಸದ್ಯದ ಪರಿಸ್ಥಿತಿ ಪರಿಶೀಲಿಸಿ, ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ನೆಟ್‌ವರ್ಕ್ ಗುಣಮಟ್ಟ ಸುಧಾರಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಸೂಚಿಸಲಾಗಿದೆ. ಮೂರ್ನಾಲ್ಕು ತಿಂಗಳಲ್ಲಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಭಾರತ್ ನೆಟ್ ಯೋಜನೆಯನ್ನು ಬೇರೆ ಏಜನ್ಸಿಗೆ ಕೊಡುವ ಪ್ರಸ್ತಾವನೆಯೂ ಸರ್ಕಾರದ ಮುಂದೆ ಇದೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ಯೋಜನೆ ಮುಂದುವರಿಸಲಾಗುವುದು ಎಂದು ಹೇಳಿದ್ದಾರೆ.
ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಗುಣಮಟ್ಟದ ಇಂಟರ್ನೆಟ್ ಸೇವೆ ಒದಗಿಸುವ ಮೂಲಕ ಗ್ರಾಮೀಣ ಭಾಗದ ಜನರ ಜತೆ ಸಂಪರ್ಕ ಸುಲಭಗೊಳಿಸಲಾಗುವುದು. ಸಭೆಯಲ್ಲಿ ಪಾಲ್ಗೊಂಡ ಬಿಎಸ್‌ಎನ್‌ಎಲ್ ಮತ್ತು ಇತರ ದೂರ ಸಂಪರ್ಕ ಇಲಾಖೆಗಳು ಹಾಗೂ ಸಂಬಂಧಪಟ್ಟ ಏಜೆನ್ಸಿಗಳ ಮುಖ್ಯಸ್ಥರು ತಮಗಿರುವ ಸಮಸ್ಯೆಗಳನ್ನು ತಿಳಿಸಿದರಲ್ಲದೆ, ಕೈಗೊಂಡಿರುವ ಕಾರ್ಯಗಳ ವಿವರವನ್ನೂ ನೀಡಿದ್ದಾರೆ. ಕುಂದುಕೊರತೆ ಸರಿಪಡಿಸಿಕೊಳ್ಳಲು ಅಗತ್ಯ ಸಹಕಾರ ನೀಡುವ ಭರವಸೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಭಾರತ್ ನೆಟ್ ಯೋಜನೆ ಮೂಲಕ ಗ್ರಾಮ ಪಂಚಾಯಿತಿಗಳಿಗೆ ಇಂಟರ್ನೆಟ್ ಸೇವೆ ಒದಗಿಸಿ, ಸರ್ಕಾರದ ನಾನಾ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ. ನಾಗರಿಕ ಸೇವಾ ಕೇಂದ್ರಗಳ ಮೂಲಕ ಜನನ, ಮರಣ ಪ್ರಮಾಣ ಪತ್ರ, ಆಧಾರ್, ಪಾವತಿ ಮುಂತಾದ ಸೇವೆಗಳನ್ನು ಒದಗಿಸಲು ಇದರಿಂದ ನೆರವಾಗಲಿದೆ. ಸುಮಾರು 6 ಸಾವಿರ ಗ್ರಾಮ ಪಂಚಾಯಿತಿಗಳ ಪೈಕಿ 4 ಸಾವಿರ ಪಂಚಾಯಿತಿಗಳಲ್ಲಿ ಈಗಾಗಲೇ ಉತ್ತಮ ನೆಟ್ ಸಂಪರ್ಕ ಇದ್ದು, ಉಳಿದ ಕಡೆ ಸಮಸ್ಯೆ ಇದೆ. ಇದನ್ನು ಬಗೆಹರಿಸಲು ಬೇರೆ ಇಂಟರ್ನೆಟ್ ಏಜೆನ್ಸಿ ನೆರವು ಪಡೆದು ಸರ್ಕಾರ ಸೇವೆ ಒದಗಿಸುತ್ತದೆ ಎಂದು ವಿವರಿಸಿದ್ದಾರೆ.
ಭಾರತ್ ನೆಟ್ ಯೋಜನೆ ಜಾರಿಯಿಂದಾಗಿ ಗ್ರಾಮೀಣ ಭಾಗದಲ್ಲಿ ಇಂಟರ್‌ನೆಟ್ ಬಳಕೆ ಪ್ರಮಾಣ ಹೆಚ್ಚಾಗಿದೆ. ಕೋವಿಡ್ ಸಂದರ್ಭದಲ್ಲಿ ಶೇ 35ರಿಂದ 40ರಷ್ಟು ಇಂಟರ್‌ನೆಟ್ ಬಳಕೆ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಮೂಲಸೌಲಭ್ಯ ಕಲ್ಪಿಸುವುದರ ಕಡೆಗೆ ಹೆಚ್ಚು ಗಮನ ನೀಡಬೇಕು ಎಂದು ಸೂಚಿಸಿದ್ದಾರೆ.
ರಾಜ್ಯದಲ್ಲಿ 93,834 ಭಾರತ್‌ನೆಟ್ ಚಂದಾದಾರರು ಇದ್ದು, ಜನವರಿಯಿಂದ ಮೇ ತಿಂಗಳವರೆಗೆ 30,239 ಜಿಬಿ ಡಾಟಾ ಬಳಕೆ ಮಾಡಿಕೊಂಡಿದ್ದಾರೆ. ಇದು ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಬಳಕೆಯದ್ದಾಗಿದೆ ಎಂದು ಹೇಳಿದ್ದಾರೆ.
ಇ-ಆಡಳಿತ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ, ಐಟಿ-ಬಿಟಿ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಇ.ವಿ.ರಮಣರೆಡ್ಡಿ, ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್, ಐಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.