ನವದೆಹಲಿ: ವಾಹನಗಳ ದಾಖಲೆ ಸಿಂಧುತ್ವವನ್ನು ಸೆಪ್ಟಂಬರ್ ವರೆಗೆ ಕೇಂದ್ರ ಸರ್ಕಾರ ವಿಸ್ತರಿಸಿದೆ. ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವಾಲಯ ಮೋಟಾರು ವಾಹನಗಳ ವಿವಿಧ ದಾಖಲೆಗಳ ಸಿಂಧುತ್ವವನ್ನು ವಿಸ್ತರಣೆ ಮಾಡಿದೆ.
ಲಾಕ್ಡೌನ್ ಮೊದಲಾದ ಕಾರಣದಿಂದ ಸಾರಿಗೆ ಕಚೇರಿಗಳಲ್ಲಿ ವಿವಿಧ ಕೆಲಸಗಳಿಗಾಗಿ ಶುಲ್ಕ ಪಾವತಿಸಿ ದಾಖಲೆಗಳನ್ನು ನವೀಕರಿಸಲು ಸಾರ್ವಜನಿಕರಿಗೆ ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಅವಧಿ ಮುಗಿದ ದಾಖಲೆಗಳ ಅವಧಿಯನ್ನು ಮುಂದುವರೆಸಲಾಗಿದೆ.
ದಾಖಲೆಗಳ ಕ್ರಮಬದ್ಧತೆಗೆ ಸಂಬಂಧಿಸಿದಂತೆ ವಿಳಂಬ ಶುಲ್ಕ ವಿಧಿಸುವುದಿಲ್ಲ. ದಾಖಲೆಗಳ ನವೀಕರಣ ಸೇರಿ ವಾಹನಗಳ ವಿವಿಧ ದಾಖಲೆಗಳ ಸಿಂಧುತ್ವ ಸೆಪ್ಟಂಬರ್ ರವರೆಗೆ ಮುಂದುವರೆಯಲಿದೆ ಎಂದು ಹೇಳಲಾಗಿದೆ.
ವಾಹನಗಳ ಅರ್ಹತಾ ಪ್ರಮಾಣ ಪತ್ರ, ಪರ್ಮಿಟ್, ಡಿಎಲ್ ಸೇರಿದಂತೆ ಸಾರಿಗೆ ಇಲಾಖೆಯ ಎಲ್ಲಾ ಸೇವೆಗಳಿಗೆ ಸೆಪ್ಟಂಬರ್ ವರೆಗೆ ಮಾನ್ಯತೆ ಹೊಂದಿರುತ್ತವೆ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, ಈ ವರ್ಷದ ಸೆಪ್ಟೆಂಬರ್ ವರೆಗೆ ಮೋಟಾರು ವಾಹನ ದಾಖಲೆಗಳ ಮಾನ್ಯತೆಯ ದಿನಾಂಕವನ್ನು ವಿಸ್ತರಿಸುವುದಾಗಿ ಪ್ರಕಟಿಸಿದ್ದಾರೆ.