ರಾಜ್ಯಸಭಾ ಚುನಾವಣೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ರಾಜ್ಯದಲ್ಲಿ ಜೋರಾಗಿವೆ. ಇಂದು ಈ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದರಿಂದ ಮೂರು ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇನ್ನು ಬಿಜೆಪಿ ಹೈಕಮಾಂಡ್ ನಿನ್ನೆ ರಾಜ್ಯಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳು ಯಾರು ಎಂದು ಸೂಚಿಸಿತ್ತು. ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿ ಹೆಸರನ್ನು ಪ್ರಕಟಿಸಿದ ಬೆನ್ನಲ್ಲೇ ನಿಜಕ್ಕೂ ಇಡೀ ಬಿಜೆಪಿ ನಾಯಕರಿಗೆ ಇದು ಆಶ್ಚರ್ಯ ಆಗಿದ್ದಂತೂ ಸತ್ಯ. ಇತ್ತ ರಮೇಶ್ ಕತ್ತಿ, ಪ್ರಕಾಶ್ ಶೆಟ್ಟಿ ಮತ್ತು ಪ್ರಭಾಕರ್ ಕೋರೆ ಹೆಸರನ್ನ ಯಡಿಯೂರಪ್ಪ ಹೈಕಮಾಂಡ್ಗೆ ಶಿಫಾರಸು ಮಾಡಿದ್ದರೂ ಅವರ ಆಯ್ಕೆ ನಡೆದಿಲ್ಲ.
ಈ ಆಯ್ಕೆ ಬೆನ್ನಲ್ಲೇ ಯಡಿಯೂರಪ್ಪ ಅವರ ವರ್ಚಸ್ಸು ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರವಾಗಿ ಇಂದು ಮಾತನಾಡಿರುವ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಮಾಧ್ಯಮಗಳಲ್ಲಿ ಏನಾದರೂ ಬರಲಿ ಯಡಿಯೂರಪ್ಪ ಏನು ಎಂಬುದು ರಾಜ್ಯದ ಜನತೆಗೆ ಗೊತ್ತಿದೆ. ಅವರ ವರ್ಚಸ್ಸು ಎಂದಿಗೂ ಕಡಿಮೆಯಾಗಿಲ್ಲ. ಇವೆಲ್ಲಾ ಊಹಾಪೋಹ ಅಷ್ಟೆ ಎಂದು ಹೇಳಿದ್ದಾರೆ.
ಇನ್ನು ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಬಿ.ಎಲ್.ಸಂತೋಷ್ ಪ್ರಭಾವ ಇದೆ ಎಂಬ ಸಚಿವ ಸಿಟಿ ರವಿಯವರ ಮಾತಿಗೆ ಪ್ರತಿಕ್ರಿಯೆ ನೀಡಿರುವ ರೇಣುಕಾಚಾರ್ಯ ಈ ವಿಚಾರವನ್ನು ಅವರ ಬಳಿಯೇ ಕೇಳಿ ಎಂದಿದ್ದಾರೆ. ಕೇಂದ್ರದ ನಾಯಕರು ಏನು ಹೇಳುತ್ತಾರೋ ಅದನ್ನು ನಾವು ಮಾಡುತ್ತೇವೆ ಎಂದು ಹೇಳಿದ್ದಾರೆ.