ಆಫ್ರಿಕಾದ ದಟ್ಟ ಕಾಡು. ಎದುರಾಳಿಯನ್ನು ಒಂದೇ ನೋಟದಲ್ಲೇ ಕೊಂದುಣ್ಣುವ ತೀಕ್ಷ್ಣ ಕಣ್ಣುಗಳುಳ್ಳ ದೈತ್ಯಾಕಾರದ ಚಿರತೆ. ಅದರ ಬಾಯಲ್ಲಿ ಪುಟಾಣಿ ಕೋತಿ ಮರಿ. ಹಸಿದ ಚಿರತೆಗೆ ಅದೇ ಆಹಾರ. ಆದರೆ, ಅಲ್ಲಿ ನಡೆದದ್ದೇ ಬೇರೆ.
ಕೋತಿಗಳ ಗುಂಪಿನಿಂದ ಅಕಸ್ಮಾತ್ ಬೇರ್ಪಟ್ಟ ಮರಿಮಂಗವೊಂದು ಅಲ್ಲೇ ಇದ್ದ ಚಿರತೆ ಕಣ್ಣಿಗೆ ಬೀಳುತ್ತದೆ. ಕೋತಿಮರಿಯ ಹತ್ತಿರ ಚಿರತೆ ಬರಲಾಂಭಿಸುತ್ತದೆ. ಹತ್ತಿರವಿದ್ದ ದೊಡ್ಡ ದೊಡ್ಡ ಗಡವ ಕೋತಿಗಳೂ ದೂರ ಸರಿಯುತ್ತವೆ.
ಸಮೀಪಕ್ಕೆ ಬಂದ ಚಿರತೆ, ಮರಿಮಂಗನ ಮೂಸಿ ನೋಡುತ್ತದೆ. ಇನ್ನೇನು ಚಿರತೆಯ ಹೊಟ್ಟೆ ಸೇರಿಯೇ ಬಿಡುತ್ತದೆ ಎಂದುಕೊಳ್ಳುವಷ್ಟರಲ್ಲಿ, ಆ ಮಂಗನ ಮರಿಯು ತುಂಟಾಟ ಶುರು ಮಾಡುತ್ತದೆ. ಚಿರತೆಯೊಂದಿಗೆ ಚಿನ್ನಾಟ ಆಡುತ್ತದೆ. ಇದಕ್ಕೆ ಮನಸೋತ ಚಿರತೆ ಸಹ ಅದನ್ನು ಮುದ್ದಿಸಲಾರಂಭಿಸುತ್ತದೆ. ಮನೆಯೊಳಗಿನ ಬೆಕ್ಕು – ಇಲಿಯಂತೆ ಚೆಲ್ಲಾಟ ಆಡಿಕೊಳ್ಳುತ್ತವೆ.
ಇದೆಲ್ಲವನ್ನೂ ದೂರದಿಂದಲೇ ಸೆರೆ ಹಿಡಿಯುತ್ತಿದ್ದ ಜರ್ಮನಿಯ ಪ್ರಸಿದ್ಧ ವನ್ಯಜೀವಿ ಛಾಯಾಗ್ರಾಹಕ ಥಾಮಸ್ ತಮ್ಮ ಕಣ್ಣನ್ನ ತಾವೇ ನಂಬಲಾಗದೆ, ಅಂದುಕೊಂಡಂತೆ ಏನೂ ಮಾಡದ ಚಿರತೆಗೊಂದು ಸಲಾಮ್ ಹೊಡೆದು, ವಿಡಿಯೋ ಮಾತ್ರ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.