
ಪೂರ್ವಿಕರು ಮನೆ ಕೆಳಗೆ, ಗೋಡೆಯಲ್ಲಿ ಅಡಗಿಸಿಟ್ಟ ನಿಧಿ ಸಿಗುವುದು ಸಹಜ. ಆದರೆ ಇಲ್ಲೊಂದು ಕಡೆ ಕಾಡಿನ ಹಿಂದಿರುವ ಬೆಟ್ಟದಲ್ಲಿ ಕೋಟ್ಯಂತರ ಮೌಲ್ಯದ ನಿಧಿ ಸಿಕ್ಕಿದೆ ಎಂದು ಹೇಳಲಾಗಿದೆ.
ಹೌದು, ರಾಕಿ ಮೌಂಟೇನ್ಸ್ ಭಾಗದಲ್ಲಿ ಕಂಚಿನ ಪೆಟ್ಟಿಗೆಯಲ್ಲಿ ಬಂಗಾರದ ಒಡವೆ ಸೇರಿದಂತೆ ಭಾರಿ ಬೆಲೆ ಬಾಳುವ ಸುಮಾರು ಒಂದು ಮಿಲಿಯನ್ ಡಾಲರ್ ಮೌಲ್ಯಕ್ಕೂ ಅಧಿಕದ ಒಡವೆಗಳು ಸಿಕ್ಕಿವೆ ಎಂದು ಪ್ರಾಚೀನ ವಸ್ತು ಸಂಗ್ರಹಕಾರ ಫಾರೆಸ್ಟ್ ಫೆನ್ ಹೇಳಿದ್ದಾರೆ.
89 ವರ್ಷದ ಫೆನ್ ಪ್ರಕಾರ, ಕೆಲದಿನಗಳ ಹಿಂದೆ ಈ ಭಾರಿ ಮೌಲ್ಯದ ನಿಧಿ ಒಬ್ಬ ವ್ಯಕ್ತಿಗೆ ಸಿಕ್ಕಿದೆ. ಗುಹೆಯ ಹಿಂದೆ ಈ ನಿಧಿಯನ್ನು ವ್ಯಕ್ತಿಯೊಬ್ಬರು ಇಟ್ಟಿದ್ದರು. ಸುಮಾರು 10 ವರ್ಷದ ಬಳಿಕ ಈ ಬಗ್ಗೆ ಮಾಹಿತಿ ನೀಡಿದ್ದರಿಂದ, ಭಾನುವಾರ ಇದನ್ನು ಹುಡುಕಿ ತೆರೆಯಲಾಗಿದೆ. ದಶಕದ ಹಿಂದೆ ವ್ಯಕ್ತಿ ಎಲ್ಲಿ ಈ ನಿಧಿಯ ಪೆಟ್ಟಿಗೆಯನ್ನು ಇಟ್ಟಿದ್ದರೋ ಅಲ್ಲಿಯೇ ಇತ್ತು ಎಂದು ಹೇಳಲಾಗಿದೆ.
ಫೆನ್ ಪ್ರಕಾರ ಈ ಪೆಟ್ಟಿಗೆಯ ಪ್ರಸ್ತಾಪವನ್ನು ಒಂದು ಕವಿತೆಯಲ್ಲಿ ಮಾಡಲಾಗಿದ್ದು, ಇದನ್ನು ಹುಡುಕಿಕೊಂಡು ಹೋದ ಕನಿಷ್ಠ ನಾಲ್ಕು ಮಂದಿ ಮೃತಪಟ್ಟಿದ್ದಾರಂತೆ. ಈ ನಿಧಿ ಪೆಟ್ಟಿಗೆಯನ್ನು ಹಲವು ಸುತ್ತು ಪ್ಯಾಕ್ ಮಾಡಲಾಗಿತ್ತು ಎಂದು ಹೇಳಲಾಗಿದೆ.