ಬೆಂಗಳೂರು: ಕೊರೊನಾ ಸೋಂಕು ತಡೆಗೆ ಲಾಕ್ ಡೌನ್ ಮುಂದುವರೆದಿರುವುದರಿಂದ ರಾಜ್ಯದಲ್ಲಿ ಆನ್ಲೈನ್ ತರಗತಿಗಳನ್ನು ನಡೆಸಿಬೇಕೇ? ಬೇಡವೇ? ಎಂಬ ಕುರಿತು ನಾಳೆ ನಿರ್ಧಾರ ಕೈಗೊಳ್ಳಲಾಗುತ್ತದೆ.
ಆನ್ಲೈನ್ ತರಗತಿಗಳನ್ನು ನಡೆಸಲು ವಿರೋಧ ವ್ಯಕ್ತವಾಗಿದೆ. ಮತ್ತೆ ಕೆಲವರು ಆನ್ ಲೈನ್ ತರಗತಿ ಪರವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಎಸ್. ಸುರೇಶ್ ಕುಮಾರ್ ಅವರು, ಶಿಕ್ಷಣ ತಜ್ಞರು ವಿವಿಧ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿ ನಡೆಸುವ ಕುರಿತು ಚರ್ಚೆ ನಡೆಸಿದ್ದಾರೆ.
ಸೋಮವಾರ ನಡೆದ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಬುಧವಾರ ಮತ್ತೊಮ್ಮೆ ಸಭೆ ನಡೆಸಲಾಗುವುದು. ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿ ಬೇಡ ಎಂದು ಹೇಳಲಾಗಿದ್ದು, ಉಳಿದ ಮಕ್ಕಳಿಗೂ ಆನ್ಲೈನ್ ತರಗತಿ ಆರಂಭಿಸುವುದದರಿಂದ ಎದುರಾಗುವ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿದೆ. ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಸಮಸ್ಯೆಯಾಗುತ್ತದೆ ಎನ್ನಲಾಗಿದೆ.
ಶಿಕ್ಷಣ ತಜ್ಞರು, ಮಾನಸಿಕ ತಜ್ಞರು ಸೇರಿದಂತೆ ಹಲವರೊಂದಿಗೆ ನಾಳೆ ಎರಡನೇ ಸುತ್ತಿನ ಸಭೆ ನಡೆಸಿ ಆನ್ಲೈನ್ ತರಗತಿ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.