ಆಂಧ್ರಪ್ರದೇಶ ವಿಧಾನಸಭೆಯ ಬಜೆಟ್ ಅಧಿವೇಶನ ಜೂನ್ 16 ರಂದು ಆರಂಭವಾಗಲಿದೆ. ರಾಜ್ಯಪಾಲ ಬಿಸ್ವ ಭೂಷಣ್ ಹರಿಚಂದನ್ ಜೂನ್ 16ರಂದು ಬೆಳಿಗ್ಗೆ 10 ಗಂಟೆಗೆ ವಿಧಾನಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ವ್ಯವಹಾರ ಸಲಹಾ ಸಮಿತಿ ಶೀಘ್ರದಲ್ಲೇ ಸಭೆ ಸೇರಿ ಅಧಿವೇಶನದ ಅವಧಿಯನ್ನು ನಿರ್ಧರಿಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಹಣಕಾಸು ಸಚಿವ ಬುಗ್ಗಾನಾ ರಾಜೇಂದ್ರನಾಥ್ 2020 – 21ನೇ ಹಣಕಾಸು ವರ್ಷದ ಪೂರ್ಣ ಜೂನ್ 18 ರಂದು ಬಜೆಟ್ ಮಂಡಿಸುವ ನಿರೀಕ್ಷೆ ಇದೆ.
ಶಾಸಕಾಂಗದ ಬಜೆಟ್ ಅಧಿವೇಶನ ಸಾಮಾನ್ಯವಾಗಿ ಪ್ರತಿ ವರ್ಷ ಫೆಬ್ರವರಿ, ಮಾರ್ಚ್ ನಲ್ಲಿ ನಡೆಯುತ್ತದೆ. ಆದರೆ ಕೊರೋನಾ ಸಾಂಕ್ರಾಮಿಕ ರೋಗ ಹರಡುವ ಕಾರಣದಿಂದ ಲಾಕ್ ಡೌನ್ ಜಾರಿಯಾಗಿ ಆಂಧ್ರಪ್ರದೇಶ ಸರ್ಕಾರ ಮಾರ್ಚ್ 28 ರಂದು ಧನ ವಿನಿಯೋಗ ಸುಗ್ರೀವಾಜ್ಞೆಯನ್ನು ತಂದು ಮೊದಲ ಮೂರು ತಿಂಗಳಿಗೆ ಹಣಕಾಸಿನ ಅನುಮೋದನೆ ಪಡೆದುಕೊಂಡಿದೆ.
ಜೂನ್ 30 ಕ್ಕೆ ಈ ಅವಧಿ ಕೊನೆಗೊಳ್ಳುವುದರಿಂದ ವಿನಿಯೋಗ ಮಸೂದೆಯನ್ನು ಶಾಸಕಾಂಗವು ನಿಗದಿತ ದಿನಾಂಕಕ್ಕೆ ಮೊದಲು ಅಂಗೀಕರಿಸಬೇಕಾಗಿದೆ. ಈ ಕಾರಣದಿಂದ ಜೂನ್ 16 ರಿಂದ ವಿಧಾನಸಭೆ ಬಜೆಟ್ ಅಧಿವೇಶನ ನಡೆಸಲು ಸರ್ಕಾರ ನಿರ್ಧರಿಸಿದೆ. ಜೂನ್ 19 ರಂದು ರಾಜ್ಯಸಭೆಗೆ ನಾಲ್ವರು ಸದಸ್ಯರನ್ನು ಆಯ್ಕೆ ಮಾಡುವ ಚುನಾವಣೆ ನಡೆಯಲಿದೆ.