ನಾವು ಪಿಜ್ಜಾ ಆರ್ಡರ್ ಮಾಡಿದರೂ ಕೆಲ ಬಾರಿ ಮನೆಗೆ ಬರಲು ವಿಳಂಬವಾಗುತ್ತದೆ. ಆದರೆ, ಇಲ್ಲೊಬ್ಬರ ಮನೆಗೆ ಆರ್ಡರ್ ಮಾಡದೆಯೂ ಪಿಜ್ಜಾ ಬರುತ್ತಿತ್ತಂತೆ. ಅದೂ ಒಮ್ಮೆಯಲ್ಲ. 9 ವರ್ಷದಿಂದ ನೂರಾರು ಬಾರಿ ಈ ರೀತಿ ಆಗಿದೆಯಂತೆ…!
ಹೌದು, ಅಂಟ್ ವರ್ಪ್ ನ 65 ವರ್ಷದ ಜೆನ್ ವ್ಯಾನ್ ಲಾಂಡೆಘೇಮ್ ಎಂಬುವವರ ಮನೆಗೆ ಹೀಗೆ ಡಿಲೆವರಿ ಬಾಯ್ ಗಳು ಪಿಜ್ಜಾ ಹಿಡಿದು ಬರುತ್ತಿದ್ದಾರಂತೆ. ಅಚ್ಚರಿಯ ಸಂಗತಿ ಎಂದರೆ, ಎಂದೂ ಜೆನ್ ಅವರು ಪಿಜ್ಜಾ ವಾಪಸ್ ಕಳಿಸಿಲ್ಲ. ಡಿಲೆವರಿ ಬಾಯ್ ಗಳನ್ನು ಬೈದಿಲ್ಲ. “ಅನಪೇಕ್ಷಿತವಾಗಿ ಬರುವ ಪಿಜ್ಜಾದಿಂದ ಹಣ ವ್ಯಯವಾಗುತ್ತಿತ್ತು. ಒಮ್ಮೆಯಂತೂ 10 ಪಿಜ್ಜಾ ಬಂದುಬಿಟ್ಟಿತ್ತು. 450 ಡಾಲರ್ ಹೊಂದಿಸುವುದು ಕಷ್ಟವಾಯಿತು. ಆದರೂ ನಾನು ಅದನ್ನು ಪಡೆದುಕೊಂಡೆ. ಏಕೆಂದರೆ ನಾನು ಪಡೆಯದಿದ್ದರೆ ಅವರು ತಂದ ಪಿಜ್ಜಾ ವ್ಯರ್ಥವಾಗಿ ಎಸೆಯಬೇಕಿತ್ತು” ಎಂದು ಜೆನ್ ಹೇಳಿಕೊಂಡಿದ್ದಾರೆ.
ಮೊದಲ ದಿನ ಡಿಲೆವರಿ ಬಾಯ್ ಬಂದು ಬಾಗಿಲು ಬಡಿದಾಗ ನಾನು ಯಾವುದೇ ಪಿಜ್ಜಾ ಆರ್ಡರ್ ಮಾಡಿಲ್ಲ ಎಂದಿದ್ದರು. ಆದರೆ, ಅಂದಿನಿಂದಲೂ ಪಿಜ್ಜಾ ಡಿಲೆವರಿ ಮಾತ್ರ ನಿಂತಿಲ್ಲ. ಬಿಸಿ, ಬಿಸಿಯಾದ, ಹೊಸ ರುಚಿಯ ಪಿಜ್ಜಾಗಳು ಸ್ಥಳೀಯ ಆಹಾರ ಮಳಿಗೆಗಳಿಂದ ಬರುತ್ತಿದ್ದವು. ವಾರದ ದಿನಗಳಲ್ಲಿ, ವಾರಾಂತ್ಯದಲ್ಲಿ ರಾತ್ರಿ 2 ಗಂಟೆಗೂ ಪಿಜ್ಜಾ ಬಂದಿದೆ.
ಇತ್ತೀಚೆಗೆ ಬೇಡದ ಪಿಜ್ಜಾ ಪೂರೈಕೆಯ ಸುತ್ತವೇ ನನ್ನ ಯೋಚನೆ ಸುತ್ತುತ್ತಿರುತ್ತದೆ. ಇದರಿಂದ ನಾನು ನಿಜವಾಗಿ ಆತಂಕಗೊಂಡಿದ್ದೇನೆ. ನಿದ್ರೆ ಬರದಂತಾಗಿದೆ. ನಾನು ಸ್ಕೂಟರ್ ತೆಗೆದುಕೊಂಡು ಹೊರಗೆ ಹೊರಟರೂ ಯಾರಾದರೂ ಪಿಜ್ಜಾ ತಂದುಬಿಟ್ಟರೆ ಎಂದು ಭಯ ಬೀಳಲಾರಂಭಿಸಿದೆ” ಎಂದು ಅವರು ಹೇಳಿಕೊಂಡಿದ್ದಾರೆ.
ವಿಚಿತ್ರ ಎಂದರೆ ಜೆನ್ ಮಾತ್ರವಲ್ಲ. ಅವರ ನಿವಾಸದಿಂದ 15 ಮೈಲಿ ದೂರದ ಫ್ಲಾಂಡರ್ಸ್ ನಲ್ಲಿರುವ ಜೆನ್ ಅವರ ಗೆಳೆಯ ಕೂಡ ಇದೇ ರೀತಿ ಕೇಳದೆಯೂ ಫಿಜ್ಜಾ ಅವರ ಮನೆಗೆ ಬರುತ್ತಿತ್ತು. ಕೆಲವು ಬಾರಿ ನಮ್ಮಿಬ್ಬರ ಮನೆಗೂ ಒಂದೇ ದಿನ ಪಿಜ್ಜಾ ಬಂದಿದ್ದಿದೆ. ಕೆಲವು ಬಾರಿ ನಾವು ಈ ವಿಷಯದ ಬಗ್ಗೆ ಚರ್ಚಿಸಿದ್ದೂ ಇದೆ ಎಂದು ಹೇಳಿಕೊಂಡಿದ್ದಾರೆ.