ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಿಗಂದೂರು ಶ್ರೀ ಸಿಗಂದೂರೇಶ್ವರಿ ದರ್ಶನಕ್ಕೆ ಪ್ರತಿನಿತ್ಯ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಆದರೆ ಲಾಕ್ ಡೌನ್ ಕಾರಣಕ್ಕೆ ಕಳೆದ ಎರಡೂವರೆ ತಿಂಗಳಿಗೂ ಅಧಿಕ ಕಾಲದಿಂದ ದೇವಸ್ಥಾನ ಬಂದ್ ಆಗಿದ್ದು, ಭಕ್ತರಿಗೆ ದೇವಿಯ ದರ್ಶನ ಸಾಧ್ಯವಾಗಿರಲಿಲ್ಲ.
ಇದೀಗ ದೇಶದಾದ್ಯಂತ ಐದನೇ ಹಂತದ ಲಾಕ್ಡೌನ್ ಜಾರಿಯಲ್ಲಿದ್ದರೂ ಸಹ ದೇವಾಲಯಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಈಗಾಗಲೇ ಮಾರ್ಗಸೂಚಿಯನ್ನು ಹೊರಡಿಸಿದ್ದು ಹೀಗಾಗಿ ದೇವಾಲಯಗಳನ್ನು ತೆರೆಯಲು ಸಿದ್ಧತೆ ನಡೆಸಲಾಗುತ್ತಿದೆ.
ಆದರೆ ಸಿಗಂದೂರಿನ ಶ್ರೀ ಚೌಡಮ್ಮ ದೇವಿ ದೇವಾಲಯವನ್ನು ಸದ್ಯಕ್ಕೆ ತೆರೆಯದಿರಲು ನಿರ್ಧರಿಸಲಾಗಿದೆ. ಕೊರೊನಾ ಸೋಂಕು ಪರಿಸ್ಥಿತಿಯನ್ನು ನೋಡಿಕೊಂಡು ಭಕ್ತರ ದರ್ಶನಕ್ಕಾಗಿ ದೇವಾಲಯವನ್ನು ತೆರೆಯುವ ಕುರಿತಂತೆ ಜೂನ್ 15ರ ನಂತರ ನಿರ್ಧರಿಸಲಾಗುವುದು ಎಂದು ಧರ್ಮದರ್ಶಿಗಳು ತಿಳಿಸಿದ್ದಾರೆ.