ಹಬ್ಬಹರಿದಿನಗಳಲ್ಲಿ ಪಾಯಸ ಮಾಡುತ್ತೇವೆ. ಬೇಗನೆ ಆಗುವ ಪಾಯಸವಿದ್ದರೆ ಸಮಯವೂ ಉಳಿಯುತ್ತದೆ. ಹಾಗಾಗಿ ಇಲ್ಲಿ ಸುಲಭವಾಗಿ ಜತೆಗೆ ರುಚಿಕರವಾಗಿ ಮಾಡುವ ಡ್ರೈ ಫ್ರೂಟ್ಸ್ ಪಾಯಸವಿದೆ. ಒಮ್ಮೆ ಟ್ರೈ ಮಾಡಿ ನೋಡಿ.
10 ರಿಂದ-12 ಬೀಜ ತೆಗೆದ ಖರ್ಜೂರ, 3 ½ ಕಪ್- ಹಾಲು, ¼ ಕಪ್- ವಾಲ್ ನಟ್ಸ್, ¼ ಕಪ್ ನಷ್ಟು ಬಾದಾಮಿ, ದ್ರಾಕ್ಷಿ-ಒಂದು ಹಿಡಿ, ½ ಟೀ ಸ್ಪೂನ್-ಏಲಕ್ಕಿ ಪುಡಿ, 1 ಟೇಬಲ್ ಸ್ಪೂನ್- ತುಪ್ಪ, ಸ್ವಲ್ಪ-ಕೇಸರಿ ದಳ.
ಮೊದಲಿಗೆ ಬಾದಾಮಿಯನ್ನು ನೀರಿನಲ್ಲಿ ನೆನೆಸಿ ಅದರ ಸಿಪ್ಪೆ ತೆಗೆದು ಎರಡು ಭಾಗ ಮಾಡಿಟ್ಟುಕೊಳ್ಳಿ. ನಂತರ ½ ಕಪ್ ಹಾಲನ್ನು ಬಿಸಿ ಮಾಡಿ ಅದಕ್ಕೆ ಬಾದಾಮಿ, ಖರ್ಜೂರ, ವಾಲ್ ನಟ್ಸ್ ಅನ್ನು ಹಾಕಿ 15 ನಿಮಿಷಗಳ ಕಾಲ ನೆನೆಸಿಡಿ.
ನಂತರ ಒಂದು ಮಿಕ್ಸಿ ಜಾರಿಗೆ ಇವಿಷ್ಟನ್ನು ಸೇರಿಸಿ ನಯವಾಗಿ ಪೇಸ್ಟ್ ಮಾಡಿಕೊಂಡು, ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ತುಪ್ಪ ಹಾಕಿಕೊಂಡು ದ್ರಾಕ್ಷಿ ಸೇರಿಸಿ ಹುರಿದುಕೊಂಡು ಎತ್ತಿಟ್ಟುಕೊಳ್ಳಿ. ನಂತರ ಅದೇ ಪ್ಯಾನ್ ಗೆ 3 ಕಪ್ ಹಾಲು ಸೇರಿಸಿ ಕುದಿಸಿ ಅದಕ್ಕೆ ಕೇಸರಿ ದಳ ಸೇರಿಸಿ ಮಧ್ಯಮ ಉರಿಯಲ್ಲಿ 5 ನಿಮಿಷಗಳ ಕಾಲ ಕುದಿಸಿ ಗ್ಯಾಸ್ ಆಫ್ ಮಾಡಿ. ಈ ಹಾಲಿನ ಮಿಶ್ರಣಕ್ಕೆ ಹುರಿದ ದ್ರಾಕ್ಷಿ ಸೇರಿಸಿ ನಂತರ ರುಬ್ಬಿಕೊಂಡ ಖರ್ಜೂರದ ಮಿಶ್ರಣ, ಏಲಕ್ಕಿ ಪುಡಿ ಸೇರಿಸಿದರೆ ರುಚಿಕರವಾದ ಡ್ರೈಫ್ರೂಟ್ಸ್ ಪಾಯಸ ರೆಡಿ.