ಕೊರೊನಾ ಸಮಯದಲ್ಲಿ ಬಡವರಂತೂ ಸಾಕಷ್ಟು ನಲುಗಿ ಹೋಗಿದ್ದಾರೆ. ಊಟವಿಲ್ಲದೆ ಪರದಾಡಿದ್ದಾರೆ. ಅನೇಕ ಮಂದಿ ಬಡವರ ಪರ ನಿಂತು ಅವರಿಗೆ ಊಟೋಪಚಾರ ಮಾಡಿದ್ದಾರೆ. ಇದೀಗ ತಮಿಳುನಾಡಿನ 13 ವರ್ಷದ ಪೋರಿ ಲಾಕ್‌ಡೌನ್ ಸಮಯದಲ್ಲಿ ಬಡವರ ಪರ ನಿಂತಿದ್ದಾಳೆ.
ಹೌದು, ಸಮಾಜಸೇವೆ ಮಾಡುತ್ತಿರುವ ತಮಿಳುನಾಡಿನ ಮದುರೈನ ಕ್ಷೌರಿಕರೊಬ್ಬರ 13 ವರ್ಷದ ಮಗಳು ತನಗಾಗಿ ಇಟ್ಟಿದ್ದ ಹಣವನ್ನು ಬಡವರಿಗೆ ಖರ್ಚು ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾಳೆ. ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಗುರಿಯಾಗಿದ್ದವರ ನೆರವಿಗೆ ನೇತ್ರಾ ಧಾವಿಸಿದ್ದಳು. ಇದೀಗ ಇವಳಿಗೆ ಗೌರವವನ್ನು ವಿಶ್ವಸಂಸ್ಥೆ ಸೂಚಿಸುತ್ತಿದೆ.
ಕ್ಷೌರಿಕ ವೃತ್ತಿಯಲ್ಲಿರುವ ಸಿ.ಮೋಹನ್ ಅವರ ಪುತ್ರಿ ಎಂ.ನೇತ್ರಾ, ತನ್ನ ವಿದ್ಯಾಭ್ಯಾಸಕ್ಕಾಗಿ ಕೂಡಿಟ್ಟಿದ್ದ 5 ಲಕ್ಷ ರೂಪಾಯಿ ಉಳಿತಾಯ ಹಣವನ್ನು 600 ಕುಟುಂಬಗಳಿಗೆ ದಿನಸಿ ಹಂಚಲು ಬಳಸಿದ್ದರು. ಈ ವಿಚಾರವಾಗಿ ವಿಶ್ವಸಂಸ್ಥೆ ಗೌರವ ಸೂಚಿಸಿದೆ. ಈಕೆಯನ್ನು ವಿಶ್ವಸಂಸ್ಥೆಯ ವಿಭಾಗವಾದ ಶಾಂತಿ ಹಾಗೂ ಅಭಿವೃದ್ಧಿ ಕುರಿತಾದ ವಿಶ್ವ ಸಂಸ್ಥೆ ಅಸೋಸಿಯೇಷನ್‌ನ ಸದ್ಭಾವನಾ ರಾಯಭಾರಿಯನ್ನಾಗಿ ಗುರುತಿಸಿ ಆಯ್ಕೆ ಮಾಡಿದೆ.
ಇದರೊಂದಿಗೆ ವಿಶ್ವಸಂಸ್ಥೆ ನ್ಯೂಯಾರ್ಕ್ ಹಾಗೂ ಜಿನೇವಾದಲ್ಲಿ ನಡೆಸಲಿರುವ ಸಮ್ಮೇಳನದಲ್ಲಿ ವಿಶ್ವನಾಯಕರ ಮುಂದೆ ಈಕೆ ಭಾಷಣ ಮಾಡುವ ಅವಕಾಶವನ್ನೂ ಪಡೆದುಕೊಂಡಿದ್ದಾಳೆ. ಹಾಗು ಒಂದು ಲಕ್ಷ ಶಿಕ್ಷಣ ವೇತನ ಕೂಡ ಸಿಗಲಿದೆ.