ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಶುಕ್ರವಾರದಂದು ಬರೋಬ್ಬರಿ 515 ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಇದರಿಂದಾಗಿ ಕಳೆದ ಎಂಟು ದಿನಗಳ ಅವಧಿಯಲ್ಲಿ ರಾಜ್ಯದಲ್ಲಿ 2 ಸಾವಿರ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾದಂತಾಗಿದೆ.
ಗಮನಾರ್ಹ ಸಂಗತಿಯೆಂದರೆ ಲಾಕ್ಡೌನ್ ಸಡಿಲಿಕೆಗೊಳಿಸಿ ಅನ್ಯ ರಾಜ್ಯಗಳಿಂದ ಜನರು ಆಗಮಿಸಲು ಅನುಮತಿ ಸಿಕ್ಕ ಬಳಿಕ ಸೋಂಕಿನ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದ್ದು, ಈಗ ವರದಿಯಾಗಿರುವ ಬಹುತೇಕ ಪ್ರಕರಣಗಳಲ್ಲಿ ಹೊರ ರಾಜ್ಯಗಳಿಂದ ಬಂದವರೇ ಸೋಂಕು ಪೀಡಿತರಾಗಿದ್ದಾರೆ. ಅದರಲ್ಲೂ ನೆರೆಯ ಮಹಾರಾಷ್ಟ್ರದಿಂದ ಬಂದವರು ಕರ್ನಾಟಕದ ಪಾಲಿಗೆ ತಲೆನೋವಾಗಿ ಪರಿಣಮಿಸಿದ್ದಾರೆ.
ಇನ್ನು ದೇಶದಲ್ಲೂ ಕೊರೊನಾ ಪೀಡಿತರ ಸಂಖ್ಯೆ ಭಾರಿ ಏರಿಕೆಯಾಗುತ್ತಿದ್ದು, ಕಳೆದ ಹದಿನಾಲ್ಕು ದಿನಗಳ ಅವಧಿಯಲ್ಲಿ ಬರೋಬ್ಬರಿ ಒಂದು ಲಕ್ಷ ಪ್ರಕರಣಗಳು ಪತ್ತೆಯಾಗಿವೆ. ಭಾರತದಲ್ಲಿ ಈಗ ಸೋಂಕು ಪೀಡಿತರ ಸಂಖ್ಯೆ 2.35 ಲಕ್ಷಕ್ಕೆ ಏರಿಕೆಯಾಗಿದ್ದು ಇಟಲಿಯನ್ನು ಹಿಂದಕ್ಕಿ ಆರನೇ ಸ್ಥಾನಕ್ಕೆ ಏರಿದೆ. ಮುಂದಿನ ದಿನಗಳಲ್ಲಿ ಕೊರೊನಾ ಮತ್ತಷ್ಟು ಅಟ್ಟಹಾಸ ಮೆರೆಯಲಿದೆ ಎನ್ನಲಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.