ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ಕಾರ್ಯಕ್ಷೇತ್ರ ಬಿಟ್ಟು ತಮ್ಮ ಊರುಗಳಿಗೆ ತೆರಳಿದ್ದಾರೆ. ಇದರಿಂದ ಮಹಾನಗರಗಳಲ್ಲಿ ವಿವಿಧ ಕ್ಷೇತ್ರಗಳ ಚಟುವಟಿಕೆಗಳಿಗೆ ಸಮಸ್ಯೆಯಾಗಿದೆ. ಹೀಗಾಗಿ ವಲಸೆ ಕಾರ್ಮಿಕರನ್ನು ವಾಪಸ್ ಕರೆಸಿಕೊಳ್ಳುವ ಪ್ರಯತ್ನ ನಡೆದಿದೆ.
ಅಚ್ಚರಿಯೆಂಬಂತೆ ಹೈದ್ರಾಬಾದ್ ನಲ್ಲಿ ಬಿಲ್ಡರ್ ಗಳು ವಲಸೆ ಕಾರ್ಮಿಕರಿಗೆ ವಿಮಾನದ ಟಿಕೆಟ್ ಪಾವತಿಸಿ ಅವರನ್ನು ವಾಪಸ್ಸು ಕರೆ ತರಲು ಪ್ರಯತ್ನಿಸಿದ್ದಾರೆ.
ಲಾಕ್ಡೌನ್ ಸಡಿಲಿಕೆ ಬಳಿಕ ತಮ್ಮ ವ್ಯವಹಾರಕ್ಕೆ ಕಿಕ್ ಸ್ಟಾರ್ಟ್ ನೀಡಲು ಕಟ್ಟಡ ನಿರ್ಮಾಣ ಕ್ಷೇತ್ರದ ಉದ್ಯಮಿಗಳು ಪ್ರಯತ್ನಶೀಲರಾಗಿದ್ದಾರೆ. ಆದರೆ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮೂಲದ ವಲಸಿಗರಿಲ್ಲದೆ ಕಾರ್ಮಿಕರ ಸಮಸ್ಯೆ ಉಂಟಾಗಿದೆ.
ಹೀಗಾಗಿ ಬಿಲ್ಡರ್ ಗಳು ವಲಸೆ ಕಾರ್ಮಿಕರಿಗೆ ಏರ್ ಟಿಕೆಟ್, ಎಸಿ ಕೋಚ್ ರೈಲಿನ ಟಿಕೆಟನ್ನು ಕಾಯ್ದಿರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಕಾರ್ಪೆಂಟರ್, ಪೇಂಟರ್, ಗ್ರಾನೈಟ್ ಕೆಲಸಗಾರರು, ಸ್ಕ್ಯಾಫೋಲ್ಡಿಂಗ್ ಮಾಡುವವರ ತುರ್ತು ಅಗತ್ಯ ಇರುವುದರಿಂದ ಅವರನ್ನು ಕರೆಸಿಕೊಳ್ಳುವ ಪ್ರಯತ್ನ ನಡೆಸಲಾಗಿದೆ. ಗುತ್ತಿಗೆದಾರರಿಗೆ ಸೂಚನೆ ಕೊಡಲಾಗಿದೆ ಎಂದು ಪ್ರೆಸ್ಟೀಜ್ ಗ್ರೂಪ್ ನ ಸುರೇಶ್ ಕುಮಾರ್ ಹೇಳಿದ್ದಾರೆ.