ನವದೆಹಲಿ: ವಿಶ್ವ ಸೈಕಲ್ ದಿನ ಜೂನ್ 3 ರಂದೇ ಪ್ರಸಿದ್ಧ ಅಟ್ಲಾಸ್ ಸೈಕಲ್ ಕಂಪನಿ ತನ್ನ ಕೈಗಾರಿಕೆಯನ್ನು ಮುಚ್ಚುವುದಾಗಿ ಘೋಷಿಸಿದೆ.
ಭಾರತದ ಪ್ರಮುಖ ಬೈಸಿಕಲ್ ಉತ್ಪಾದನಾ ಕಂಪನಿಯಾಗಿರುವ ಅಟ್ಲಾಸ್ ಸೈಕಲ್ ಕಂಪನಿ ಆರ್ಥಿಕ ಹಿಂಜರಿತದ ಕಾರಣ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿರುವ ತನ್ನ ಕೈಗಾರಿಕೆಯನ್ನು ಮುಚ್ಚುವುದಾಗಿ ಹೇಳಿದೆ. ಇದರಿಂದಾಗಿ ಸುಮಾರು ಒಂದು ಸಾವಿರ ಜನರಿಗೆ ಉದ್ಯೋಗ ನಷ್ಟವಾಗಲಿದೆ.
1951 ರಲ್ಲಿ ಸಣ್ಣದಾಗಿ ಆರಂಭವಾದ ಹರಿಯಾಣದ ಈ ಕಂಪನಿ 1965ರಲ್ಲಿ ದೇಶದ ಪ್ರಸಿದ್ಧ ಸೈಕಲ್ ಉತ್ಪಾದನೆ ಕಂಪನಿಯಾಗಿ ಬೆಳದಿತ್ತು. ಪ್ರತಿವರ್ಷ ಸುಮಾರು 40 ಲಕ್ಷ ಸೈಕಲ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದ ಕಂಪನಿ ನಂತರದ ದಿನಗಳಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು.
2014ರಲ್ಲಿ ಮಧ್ಯಪ್ರದೇಶದ ಘಟಕವನ್ನು ಮುಚ್ಚಲಾಗಿದ್ದು, 2018 ರಲ್ಲಿ ಸೋನಿಪತ್ ಕಾರ್ಖಾನೆಗೆ ಬೀಗ ಹಾಕಲಾಗಿತ್ತು. ಈಗ ಉತ್ತರ ಪ್ರದೇಶದ ಗಾಜಿಯಾಬಾದ್ ಕಾರ್ಖಾನೆಯ ಬಾಗಿಲು ಹಾಕಲಾಗುವುದು ಎಂದು ಹೇಳಲಾಗಿದೆ.