ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಶಾಲೆಗಳ ಆರಂಭಕ್ಕೆ ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಜುಲೈ 1 ರಿಂದ ಹಂತಹಂತವಾಗಿ ಶಾಲೆಗಳ ಆರಂಭಕ್ಕೆ ಚಿಂತನೆ ನಡೆದಿದೆ. ಈ ಕುರಿತು ಪೋಷಕರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.
ಆದರೆ, ಕೊರೋನಾ ಸಂದರ್ಭದಲ್ಲಿ ಶಾಲೆ ಆರಂಭಿಸಲು ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಶಾಲೆಗಳ ಆರಂಭಕ್ಕೆ ತರಾತುರಿ ಇಲ್ಲವೆಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಮಕ್ಕಳ ಸುರಕ್ಷತೆಗೆ ಸರ್ಕಾರ ಆದ್ಯತೆ ನೀಡಲಿದ್ದು ಪೋಷಕರ ಅಭಿಪ್ರಾಯ ಪಡೆದು ಕೇಂದ್ರಕ್ಕೆ ಜೂನ್ 15 ರಂದು ವರದಿ ಕಳುಹಿಸಲಾಗುವುದು. ನಂತರ ಶಾಲೆ ಆರಂಭದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಶಾಲೆಗಳ ಆರಂಭಕ್ಕೆ ಪೋಷಕರು, ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಂಬಂಧಿಸಿದ ಎಲ್ಲರ ಅಭಿಪ್ರಾಯ ಪಡೆದು ಕೇಂದ್ರಕ್ಕೆ ವರದಿ ಸಲ್ಲಿಸಲಾಗುವುದು. ಕೇಂದ್ರದ ನಿರ್ದೇಶನದಂತೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.