ಸ್ಯಾಂಡಲ್ವುಡ್ನ ನವರಸ ನಾಯಕ ಜಗ್ಗೇಶ್ ಸಿನಿಮಾ, ಅವರ ನಟನೆ, ಕಾಮಿಡಿ ಯಾರಿಗೆ ತಾನೆ ಇಷ್ಟವಾಗೋದಿಲ್ಲ. ಎಂಥವರೂ ಇವರ ಕಾಮಿಡಿಗೆ ಮನಸೋಲದೆ ಇರೋದಿಲ್ಲ. ನಟ ಜಗ್ಗೇಶ್ ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಇದೀಗ ಜಗ್ಗೇಶ್ ತಮ್ಮ ಸಿನಿ ಬದುಕಿನಲ್ಲಿ 75 ಲಕ್ಷ ಹಣ ಕಳೆದುಕೊಂಡಿರುವ ನೋವಿನ ಕಥೆಯನ್ನು ಹೇಳಿಕೊಂಡಿದ್ದಾರೆ. ಸಾಲ ತೀರಿಸಲು ತಮ್ಮ ಮನೆಯನ್ನೇ ಮಾರಿದ್ದರಂತೆ ಈ ನಟ.
ಜಗ್ಗೇಶ್ ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಕನ್ನಡಿಗರಿಗೆ ವಿಭಿನ್ನ ಚಿತ್ರ ನೀಡಬೇಕು ಹಾಗೂ ಹೊರ ರಾಜ್ಯಗಳಿಗೂ ನನ್ನ ಪ್ರತಿಭೆಯನ್ನು ನಿರೂಪಿಸಬೇಕು ಎಂಬ ಬಯಕೆಯಿಂದ ನನ್ನ ಸ್ವಂತ ಬಂಡವಾಳ ಹಾಕಿ ಬಹಳ ನಂಬಿಕೆಯಿಂದ ‘ಮೇಕಪ್’ ಸಿನಿಮಾ ಮಾಡಿದ್ದೆ. ಆದರೆ ದೌರ್ಭಾಗ್ಯದಿಂದ 2002ರಲ್ಲಿಯೇ 75ಲಕ್ಷ ರೂ. ಕಳೆದುಕೊಂಡಿದ್ದೆ. ಆ ಸಾಲ ತೀರಿಸಲು ಅಂದು ಮಾರಿದ ಮನೆ ಇಂದು 35 ಕೋಟಿ ರೂ. ಆಸ್ತಿ. ಅದನ್ನು ಕೊಂಡಿದ್ದ ನನ್ನ ಮಿತ್ರನಿಗೆ ಇಂದು 16ಲಕ್ಷ ರೂ. ಬಾಡಿಗೆ ಬರುತ್ತಿದೆ ಎಂದು ಜಗ್ಗೇಶ್ ನೋವು ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಸಿನಿಮಾಗಾಗಿ ಹಾಕಿದ್ದ ಬಂಡವಾಳದ ಬಗ್ಗೆಯೂ ಮಾತನಾಡಿದ್ದಾರೆ.