ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಕಳೆದ ಎರಡು ತಿಂಗಳಿಗೂ ಅಧಿಕ ಕಾಲದಿಂದ ಲಾಕ್ಡೌನ್ ಜಾರಿಗೊಳಿಸಿದ್ದು, ಈ ಸಂದರ್ಭದಲ್ಲಿ ವಿಮಾನ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಹೀಗಾಗಿ ಪರ ಊರುಗಳಿಗೆ ತೆರಳಿದ್ದವರು ಅಲ್ಲಿಯೇ ಸಿಲುಕಿಕೊಂಡಿದ್ದರು.
ನಾಲ್ಕನೇ ಹಂತದ ಲಾಕ್ಡೌನ್ ಸಂದರ್ಭದಲ್ಲಿ ಬಹಳಷ್ಟು ವಿನಾಯಿತಿಗಳನ್ನು ನೀಡಲಾಗಿದ್ದು ಹೀಗಾಗಿ ದೇಶಿಯ ವಿಮಾನ ಸಂಚಾರ ಆರಂಭವಾಗಿದೆ. ಕಡ್ಡಾಯ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಹಲವು ನಿಯಮಗಳನ್ನು ಪ್ರಯಾಣಿಕರಿಗೆ ವಿಧಿಸಲಾಗಿದೆ.
ಇದರ ಮಧ್ಯೆ ಮಧ್ಯಪ್ರದೇಶದ ಅಬಕಾರಿ ಉದ್ಯಮಿಯೊಬ್ಬರು ವಿಮಾನ ನಿಲ್ದಾಣದ ಜನಜಂಗುಳಿ ತಪ್ಪಿಸುವ ಸಲುವಾಗಿ ಹಾಗೂ ವಿಮಾನದಲ್ಲಿ ಪ್ರಯಾಣಿಸುವ ಯಾರಿಗಾದರೂ ಕೊರೊನಾ ಸೋಂಕು ಇದ್ದರೆ ಎಂಬ ಕಾರಣಕ್ಕೆ ಸುರಕ್ಷತೆಯ ದೃಷ್ಟಿಯಿಂದ ತಮ್ಮ ಮಗಳು, ಮೊಮ್ಮಕ್ಕಳು ಹಾಗೂ ಕೆಲಸದಾಕೆ ಪ್ರಯಾಣಿಸಲು ಪ್ರತ್ಯೆಕ ವಿಮಾನ ಬುಕ್ ಮಾಡಿ ಗಮನ ಸೆಳೆದಿದ್ದಾರೆ.
180 ಸೀಟುಗಳುಳ್ಳ ಖಾಸಗಿ ಕಂಪನಿಯ ಈ ದೊಡ್ಡ ವಿಮಾನದಲ್ಲಿ ಕೇವಲ ನಾಲ್ವರು ಮಾತ್ರ ಮಧ್ಯಪ್ರದೇಶ ಬೋಪಾಲ್ ವಿಮಾನ ನಿಲ್ದಾಣದಿಂದ ನವದೆಹಲಿಗೆ ಪ್ರಯಾಣಿಸಿದ್ದು, ಇದಕ್ಕಾಗಿ ಉದ್ಯಮಿ 20 ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾರೆ ಎಂದು ತಿಳಿದುಬಂದಿದೆ.