ಬೆಳಿಗ್ಗೆ ತಿಂಡಿಗೆ ದೋಸೆ, ಇಡ್ಲಿ, ಪೂರಿ ಮಾಡಿಕೊಂಡು ಸವಿಯುತ್ತ ಇರುತ್ತೀರಿ. ಒಮ್ಮೆ ಈ ಅಕ್ಕಿ ಕಡುಬು ಟ್ರೈ ಮಾಡಿ ನೋಡಿ. ರುಚಿಕರವಾಗಿರುತ್ತದೆ.
ಅಕ್ಕಿ-2 ಕಪ್, ನೀರು 3 ¼ ಕಪ್, ಎಣ್ಣೆ-ಸ್ವಲ್ಪ, ಜೀರಿಗೆ ¼ ಟೀ ಸ್ಪೂನ್, ತೆಂಗಿನಕಾಯಿ ತುರಿ-1/2 ಕಪ್, ಉಪ್ಪು-ರುಚಿಗೆ ತಕ್ಕಷ್ಟು.
ಅಕ್ಕಿಯನ್ನು ಮೊದಲಿಗೆ ತೊಳೆದು 4 ಗಂಟೆಗಳ ಕಾಲ ನೆನೆಸಿಡಿ. ನಂತರ ನೆನೆಸಿಟ್ಟ ಅಕ್ಕಿಯನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ನೀರು, ಕಾಯಿತುರಿ ಸೇರಿಸಿ ತರಿ ತರಿಯಾಗಿ ರುಬ್ಬಿಕೊಳ್ಳಿ. ನಂತರ ಇದನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಈ ಮಿಶ್ರಣವನ್ನು ರಾತ್ರಿಯಿಡೀ ಹಾಗೆಯೇ ಇಟ್ಟುಬಿಡಿ. ಬೆಳಿಗ್ಗೆ ಇದಕ್ಕೆ ನೀರು ಸೇರಿಸಿಕೊಳ್ಳಿ. ಈ ಹಿಟ್ಟು ತುಂಬಾ ದಪ್ಪಗೆ ಇರಬಾರದು. ತೆಳುವಾಗಿ ಇರಲಿ.
ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನಂತರ ಒಗ್ಗರಣೆ ಪಾತ್ರೆಗೆ 1 ಚಮಚ ಎಣ್ಣೆ ಹಾಕಿ ಅದಕ್ಕೆ ಜೀರಿಗೆ ಹಾಕಿ. ಹಿಟ್ಟಿನ ಮಿಶ್ರಣ ಸೇರಿಸಿ. ಹದ ಉರಿಯಲ್ಲಿ ಬೇಯಿಸಿಕೊಳ್ಳಿ. ಹಿಟ್ಟು ಗಟ್ಟಿಯಾಗುವವರೆಗೆ ಬೇಯಿಸಿಕೊಂಡು ಗ್ಯಾಸ್ ಆಫ್ ಮಾಡಿ. ಕೈಗೆ ನೀರು ಸವರಿಕೊಂಡು ಈ ಮಿಶ್ರಣದಿಂದ ಉಂಡೆ ಕಟ್ಟಿಕೊಳ್ಳಿ. ಅಥವಾ ಬಟ್ಟಲು ಕಟ್ಟಿಕೊಂಡು. ಅಗಲವಾದ ಪಾತ್ರೆಯಲ್ಲಿ ಇಟ್ಟು ಇದನ್ನು ಇಡ್ಲಿ ಪಾತ್ರೆ, ಅಥವಾ ಕುಕ್ಕರ್ ನಲ್ಲಿ ಇಟ್ಟು ಆವಿಯಲ್ಲಿ 15 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.