ಬಿಸಿಲಿನ ತಾಪಕ್ಕೆ ಮೈ ಬೆವರುವುದು ಸಾಮಾನ್ಯ. ಕೆಲವರ ಬೆವರು ದುರ್ಗಂಧ ಬೀರುತ್ತಿರುತ್ತದೆ. ಇದಕ್ಕೂ ಮದ್ದಿದೆ. ಅತಿಯಾಗಿ ಬೆವರುವುದರಿಂದ ಬಟ್ಟೆ ಒದ್ದೆಯಾಗಿ ಕಿರಿಕಿರಿ ಆಗಬಹುದು, ಇನ್ನು ಕೆಲವೊಮ್ಮೆ ಬೆವರಿನ ಕೆಟ್ಟ ವಾಸನೆ ಬೇಸತ್ತು ಹೋಗುವಂತೆ ಮಾಡಬಹುದು. ದುರ್ವಾಸನೆಯನ್ನು ಓಡಿಸುವ ಮನೆ ಮದ್ದುಗಳ ಬಗ್ಗೆ ತಿಳಿಯೋಣ.
ಸ್ನಾನ ಮಾಡಿದ ನಂತರ ಸ್ವಲ್ಪ ನೀರಿಗೆ ಅಡುಗೆ ಸೋಡಾ ಹಾಕಿ ದೇಹವನ್ನು ಈ ನೀರಿನಿಂದ ತೊಳೆದು, ನಂತರ ಬಟ್ಟೆಯಿಂದ ಒರೆಸಿಕೊಳ್ಳಿ. ಇದರಿಂದ ಬೆವರಿನ ದುರ್ವಾಸನೆಯನ್ನು ಹೋಗಲಾಡಿಸಬಹುದು. ಸ್ನಾನದ ನಂತರ ಸೌತೆಕಾಯಿ ಹೋಳುಗಳಿಂದ ಕಂಕುಳನ್ನು ಉಜ್ಜಿಕೊಳ್ಳಿ, ಬಳಿಕ ಒಣಗಲು ಬಿಡಿ. ಇದರಿಂದ ಕೆಟ್ಟ ವಾಸನೆ ಹೊರ ಹಾಕುವ ಬ್ಯಾಕ್ಟೀರಿಯಾ ಉತ್ಪತ್ತಿ ಆಗುವುದನ್ನು ಸೌತೆಕಾಯಿ ತಡೆಯುತ್ತದೆ.
ಆಪಲ್ ಸೈಡರ್ ವಿನೆಗರ್ ಕೂಡ ಬೆವರಿನ ವಾಸನೆಯನ್ನು ಹೋಗಲಾಡಿಸುತ್ತದೆ. ಸ್ನಾನಕ್ಕೆ ಅರ್ಧ ಗಂಟೆ ಮೊದಲು ಕಂಕುಳಿಗೆ ವಿನೆಗರ್ ಹಚ್ಚಿ ಸ್ನಾನದ ವೇಳೆ ಸೋಪು ಹಚ್ಚಿ ಕಂಕುಳನ್ನು ಸ್ವಚ್ಛಗೊಳಿಸಿ. ನಿಂಬೆಹಣ್ಣು ಕಂಕುಳಿನ ಕಪ್ಪು ಕಲೆಗಳನ್ನು ಜೊತೆಗೆ ವಾಸನೆಯನ್ನು ಕೂಡ ಹೋಗಲಾಡಿಸುತ್ತದೆ.