ಬೆಳಿಗ್ಗೆ ತಿಂಡಿಗೆ ಏನು ಮಾಡಲಿ ಎಂದು ತಲೆಬಿಸಿ ಮಾಡಿಕೊಳ್ಳುವವರಿಗೆ ಇಲ್ಲಿ ಸುಲಭವಾಗಿ ಮಾಡುವ ಗೋಧಿ ದೋಸೆ ರೆಸಿಪಿ ಇದೆ ನೋಡಿ. ಇದು ತಿನ್ನಲು ರುಚಿಕರವಾಗಿರುತ್ತದೆ ಜತೆಗೆ ಬೇಗನೆ ರೆಡಿಯಾಗುತ್ತದೆ.
ಒಂದು ದೊಡ್ಡ ಬೌಲ್ ಗೆ ½ ಕಪ್ ಗೋಧಿ ಹಿಟ್ಟು, ½ ಕಪ್ ಅಕ್ಕಿ ಹಿಟ್ಟು, 2 ಟೇಬಲ್ ಸ್ಪೂನ್ ರವಾ, 1 ಟೇಬಲ್ ಸ್ಪೂನ್ ಮೊಸರು ಹಾಕಿ. ಅದಕ್ಕೆ 1 ಕಪ್ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ನಂತರ ಒಂದು ಸಣ್ಣ ಈರುಳ್ಳಿಯನ್ನು ಸಣ್ಣಗೆ ಕತ್ತರಿಸಿಕೊಂಡು ಅದಕ್ಕೆ 1 ಇಂಚು ಶುಂಠಿ ತುರಿ, 1 ಹಸಿಮೆಣಸು, 2 ಟೇಬಲ್ ಸ್ಪೂನ್ ಕೊತ್ತಂಬರಿ ಸೊಪ್ಪು, 2 ಟೇಬಲ್ ಸ್ಪೂನ್ ಕರಿಬೇವು, 1 ಟೀ ಸ್ಪೂನ್ ಜೀರಿಗೆ ಪುಡಿ, 1 ಟೀ ಸ್ಪೂನ್ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ನಂತರ ಬೇಕಾದರೆ ನೀರು ಸೇರಿಸಿ. ಈ ಹಿಟ್ಟು ಸ್ವಲ್ಪ ನೀರು ಆಗಿದ್ದರೆ ದೋಸೆ ಚೆನ್ನಾಗಿ ಬರುತ್ತದೆ. 20 ನಿಮಿಷ ದೋಸೆ ಹಿಟ್ಟು ಹಾಗೇ ಇಟ್ಟು ಬಿಡಿ. ನಂತರ ಬೇಕಿದ್ದರೆ ನೀರು ಸೇರಿಸಿ. ಗ್ಯಾಸ್ ಮೇಲೆ ಒಂದು ತವಾ ಇಟ್ಟು ಅದು ಬಿಸಿಯಾಗುತ್ತಲೇ ತುಸು ಎಣ್ಣೆ ಸವರಿ ತೆಳುವಾಗಿ ದೋಸೆ ಮಾಡಿಕೊಳ್ಳಿ. ಎರಡು ಕಡೆ ಚೆನ್ನಾಗಿ ಬೇಯಿಸಿಕೊಳ್ಳಿ.