ಡೆಹ್ರಾಡೂನ್: ಕರೋನಾ ಲಾಕ್ಡೌನ್ ಕರ್ತವ್ಯದಲ್ಲಿರುವ ಪೊಲೀಸರ ಸಂಕಷ್ಟದ ಕುರಿತು ಉತ್ತರಾಖಂಡದಲ್ಲಿ ಮಾಡಿದ ವಿಡಿಯೋ ಕಣ್ಣೀರು ತರಿಸುವಂತಿದೆ.
ಪಿತೋರಾಗರ್ ನ ಜಾಜರ್ದೇವಲ್ ಪೊಲೀಸ್ ಠಾಣೆಯಲ್ಲಿ ಲಾಕ್ಡೌನ್ ಕರ್ತವ್ಯ ನಿರ್ವಹಿಸುವ ಮಹಿಳಾ ಪೊಲೀಸ್ ಸಿಬ್ಬಂದಿ ವಿನಿತಾ ಮಹರ್ ಎದುರಿಸುವ ಸವಾಲುಗಳ ವಿಡಿಯೋ ವಿಶ್ವದ ಇಡೀ ಪೊಲೀಸ್ ಸಮುದಾಯ ಎದುರಿಸುತ್ತಿರುವ ಕೈಗನ್ನಡಿಯಂತಿದೆ.
ಬಿಸಿಲಲ್ಲಿ ರಸ್ತೆಯಲ್ಲಿ ನಿಂತು, ನೂರಾರು ಅಪರಿಚಿತರನ್ನು ಎದುರಿಸಿ, ವಾಹನ ತಪಾಸಣೆ ಮಾಡಿ ಬರುವ ವಿನಿತಾ ಅವರಿಗೆ ಸೋಂಕಿನ ಆತಂಕವಿರುತ್ತದೆ. ತಮ್ಮ ಮಗನಿಗೂ ಹರಡಬಾರದು ಎಂಬ ಕಾರಣಕ್ಕೆ ಆತನಿಂದ ದೂರವಿರಲು ಪ್ರಯತ್ನ ಮಾಡುತ್ತಾರೆ. ಆದರೆ, ಮನೆಗೆ ಬಂದ ಅಮ್ಮನಿಂದ ದೂರವಿರಲಾರದೇ ಬಾಲಕ ಅಳುತ್ತಾನೆ. ಅಪ್ಪಿಕೊಳ್ಳಲು ಬರುತ್ತಾನೆ. ಆತನನ್ನು ದೂರ ತಳ್ಳಿ ವಿನಿತಾ ಕೋಣೆಗೆ ಹೋಗಿ ಬಾಗಿಲು ಹಾಕಿಕೊಳ್ಳುತ್ತಾರೆ. ಊಟಕ್ಕೆ ಕುಳಿತು ತುತ್ತು ತಿಂದು ಮುಗಿಸುವ ಮೊದಲೇ ಅವರಿಗೆ ಕರ್ತವ್ಯದ ಕರೆ ಬರುತ್ತದೆ. ಡೆಹ್ರಾಡೂನ್ ಐಪಿಎಸ್ ಅಧಿಕಾರಿ ಅಶೋಕ್ ಕುಮಾರ್ ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ.