ಕೊರೋನಾ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಿದ ಪ್ರಧಾನಿ ನರೇಂದ್ರ ಮೋದಿ ವಿಶ್ವದ ಅಗ್ರ ನಾಯಕರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಕೋರೋನಾ ಸೋಂಕು ತಡೆಗೆ ಮತ್ತು ಲಾಕ್ಡೌನ್ ಪರಿಣಾಮಕಾರಿ ಜಾರಿಗೆ ಕ್ರಮ ಕೈಗೊಳ್ಳದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೈನಸ್ ಮೂರನೇ ಸ್ಥಾನದಲ್ಲಿದ್ದಾರೆ.
ಕೋರೋನಾ ಬಿಕ್ಕಟ್ಟನ್ನು ಸಮರ್ಥವಾಗಿ ನಿರ್ವಹಿಸಿದ ವಿಶ್ವದ ನಾಯಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅಗ್ರಸ್ಥಾನ ನೀಡಲಾಗಿದೆ. ಅಮೆರಿಕದ ಖಾಸಗಿ ಕಂಪನಿ ನಡೆಸಿದ ಸಮೀಕ್ಷೆಯಲ್ಲಿ ಈ ಸ್ಥಾನ ನೀಡಲಾಗಿದೆ. ಜನವರಿ 1ರಿಂದ ಏಪ್ರಿಲ್ 14 ರ ವರೆಗಿನ ಜಾಗತಿಕ ವರದಿ ಆಧರಿಸಿ ಪ್ರಧಾನಿ ಮೋದಿ ಅವರಿಗೆ 68 ಅಂಕದೊಂದಿಗೆ ಮೊದಲ ಸ್ಥಾನ ನೀಡಲಾಗಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಅವರಿಗೆ -3 ಅಂಕ ಸಿಕ್ಕಿದೆ.
ಹಿಂದೆ ಅಭಿವೃದ್ಧಿ ಹೊಂದುತ್ತಿರುವ ಭಾರತದಂತಹ ದೇಶಗಳಲ್ಲಿ ಮನುಷ್ಯರ ಜೀವಕ್ಕೆ ಬೆಲೆ ಇಲ್ಲ. ಅಮೆರಿಕದಂತಹ ಮುಂದುವರೆದ ದೇಶಗಳಲ್ಲಿ ಜೀವ ಅಮೂಲ್ಯ ಎಂದು ಹೇಳಲಾಗುತ್ತಿತ್ತು. ಈಗ ಕೋರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಇದು ಸುಳ್ಳು ಎನ್ನುವುದು ಸಾಬೀತಾಗಿದೆ. ಅಮೆರಿಕದಲ್ಲಿ ದುಡ್ಡಿಗೆ ಮನ್ನಣೆ ನೀಡಿದರೆ ಭಾರತದಲ್ಲಿ ಜೀವಕ್ಕೆ ಮಣೆ ಹಾಕಲಾಗಿದೆ. ಸಾವಿನ ಸರಣಿಯೇ ಮುಂದುವರೆದಿದ್ದರೂ ಅಮೆರಿಕ ಅಧ್ಯಕ್ಷ ಲಾಕ್ ಡೌನ್ ಮಾಡದೇ ಆರ್ಥಿಕ ಚಟುವಟಿಕೆಗೆ ಒತ್ತು ನೀಡಿದ್ದಾರೆ. ಆದರೆ, ಆರ್ಥಿಕತೆಯನ್ನೇ ತ್ಯಾಗಮಾಡಿ ಪ್ರಧಾನಿ ಮೋದಿ ಜೀವಕ್ಕೆ ಬೆಲೆ ಕೊಟ್ಟಿದ್ದಾರೆ. ಭಾರತದಲ್ಲಿ ಜೀವ ರಕ್ಷಣೆಗೆ ಆದ್ಯತೆ ನೀಡಲಾಗಿದೆ ಎಂದು ಹೇಳಲಾಗಿದೆ.