ಊಟವಾದ ಮೇಲೆ ವೀಳ್ಯದೆಲೆ ಸವಿಯುವುದು ಕೆಲವರಿಗೆ ರೂಢಿ. ಇಂತಹ ವೀಳ್ಯದೆಲೆಯಿಂದ ರುಚಿಕರವಾದ ಲಡ್ಡು ಕೂಡ ಮಾಡಬಹುದು ಗೊತ್ತಾ. ಮಾಡುವುದಕ್ಕೆ ಹೆಚ್ಚೆನೂ ಸಾಮಾಗ್ರಿಗಳು ಕೂಡ ಬೇಡ. ಥಟ್ಟಂತ ಆಗಿ ಬಿಡುತ್ತೆ.
ಬೇಕಾಗುವ ಸಾಮಾಗ್ರಿಗಳು: 5-6 ವೀಳ್ಯದೆಲೆ, ಅರ್ಧ ಕಪ್-ಕಂಡೆನ್ಸಡ್ ಮಿಲ್ಕ್, 1 ½ ಕಪ್-ಒಣಕೊಬ್ಬರಿ ತುರಿ, 1 ಟೇಬಲ್ ಸ್ಪೂನ್-ತುಪ್ಪ, ಗುಲ್ಕನ್-3 ಟೇಬಲ್ ಸ್ಪೂನ್.
ಮಾಡುವ ವಿಧಾನ: ವೀಳ್ಯದೆಲೆಯನ್ನು ಚೆನ್ನಾಗಿ ತೊಳೆದು ಚಿಕ್ಕ ಚಿಕ್ಕದ್ದಾಗಿ ಕೈಯಲ್ಲಿಯೇ ಕತ್ತರಿಸಿಕೊಂಡು ಒಂದು ಮಿಕ್ಸಿ ಜಾರಿಗೆ ಹಾಕಿ ನಂತರ ಇದಕ್ಕೆ ಕಂಡೆನ್ಸಡ್ ಮಿಲ್ಕ್ ಅನ್ನು ಕೂಡ ಸೇರಿಸಿ ರುಬ್ಬಿಕೊಳ್ಳಿ. ನಂತರ ಒಂದು ಪ್ಯಾನ್ ಗೆ ತುಪ್ಪ ಹಾಕಿಕೊಂಡು ಅದಕ್ಕೆ ತೆಂಗಿನಕಾಯಿ ತುರಿ ಸೇರಿಸಿ 1 ನಿಮಿಷಗಳ ಕಾಲ ಹುರಿದುಕೊಳ್ಳಿ. ನಂತರ ಇದಕ್ಕೆ ರುಬ್ಬಿಟ್ಟುಕೊಂಡ ಮಿಶ್ರಣ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಇದು ಒಂದು ಹಿಟ್ಟಿನ ಮುದ್ದೆ ರೀತಿ ಆಗುವವರೆಗೆ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಇದನ್ನು ಒಂದು ತಟ್ಟೆಗೆ ತೆಗೆದಿಟ್ಟುಕೊಂಡು ತಣ್ಣಗಾಗುವುದಕ್ಕೆ ಬಿಡಿ. ನಂತರ ಇದರಿಂದ ಚಿಕ್ಕ ಉಂಡೆ ಕಟ್ಟಿ ಕೈಯಲ್ಲಿ ತುಸು ತಟ್ಟಿಕೊಳ್ಳಿ. ನಂತರ ಇದರ ಮಧ್ಯೆ ಭಾಗಕ್ಕೆ ಗುಲ್ಕನ್ ಹಾಕಿ ಮತ್ತೆ ಉಂಡೆ ಕಟ್ಟಿ ತೆಂಗಿನಕಾಯಿ ತುರಿಯಲ್ಲಿ ಹೊರಳಾಡಿಸಿ ತೆಗೆಯಿರಿ.