ಕಾಪು-ಉಡುಪಿಯ ಸುಂದರ ಪ್ರವಾಸಿ ತಾಣಗಳಲ್ಲಿ ಒಂದು. ಮನೋಹರ ಬೀಚ್ ನೊಂದಿಗೆ ಲೈಟ್ ಹೌಸ್ ಇಲ್ಲಿನ ಪ್ರಮುಖ ಅಕರ್ಷಣೆ. ಇದು ಮಂಗಳೂರಿನಿಂದ ೪೦ ಕಿ.ಮೀ ಹಾಗೂ ಉಡುಪಿಯಿಂದ ೧೩ ಕಿ.ಮಿ.ದೂರದಲ್ಲಿದೆ. ಅರೇಬಿಯನ್ ಬೀಚ್ ಎಂದೇ ಕರೆಯಿಸಿಕೊಳ್ಳುವ ಈ ಪ್ರದೇಶದಲ್ಲಿ ಹಲವಾರು ಚಿತ್ರಗಳ ಚಿತ್ರೀಕರಣ ನಡೆದಿದೆ.
ಜನಜಂಗುಳಿಯಿಂದ ದೂರದಲ್ಲಿರುವ ಈ ತಾಣದಲ್ಲಿ ಲೈಟ್ ಹೌಸ್ ಇದ್ದು ಇದರ ವೀಕ್ಷಣೆಗೆಂದೇ ನೂರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಸೂರ್ಯೋದಯ ಹಾಗೂ ಸೂರ್ಯಾಸ್ತದ ರಮಣೀಯ ದೃಶ್ಯ ಎಲ್ಲರನ್ನೂ ಮಂತ್ರಮುಗ್ಧಗೊಳಿಸುತ್ತದೆ. ಪ್ರತಿ ದಿನ ಸಂಜೆ ೪.೩೦ಕ್ಕೆ ತೆರೆಯುವ ಇದು ಸೂರ್ಯ ಮುಳುಗುತ್ತಲೇ ಮುಚ್ಚುತ್ತದೆ.
೧೯೦೧ರಲ್ಲಿ ಇದನ್ನು ನಿರ್ಮಿಸಲಾಗಿದ್ದು ಭೂಮಟ್ಟದಿಂದ ೨೭ ಮೀಟರ್ ಎತ್ತರವಾಗಿದೆ. ಟಿಕೆಟ್ ದರ ೧೦ ರೂಪಾಯಿ. ಕ್ಯಾಮರ ಒಯ್ಯಬೇಕಿದ್ದರೆ ಮತ್ತೆ ೨೦ ರೂಪಾಯಿ ನೀಡಬೇಕು.
ಲೈಟ್ ಹೌಸ್ ಮೇಲೇರಿ ನೀಲ ಸಮುದ್ರವನ್ನು, ಕಡಲ ಕಿನಾರೆಯನ್ನು, ಭೂಪ್ರದೇಶವನ್ನು ವೀಕ್ಷಿಸುವುದೇ ಒಂದು ಸೋಜಿಗ.