ಚಪಾತಿ, ಪರೋಟ ಮಾಡಿದಾಗ ರುಚಿಕರವಾದ ಚಿಕನ್ ಕುರ್ಮಾವಿದ್ದರೆ ಚೆನ್ನಾಗಿರುತ್ತದೆ. ಸುಲಭವಾಗಿ ಚಿಕನ್ ಕುರ್ಮಾ ಮಾಡುವ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು ಕಡಿಮೆ. ಥಟ್ಟಂತ ರೆಡಿಯಾಗುತ್ತೆ ಈ ರುಚಿಕರವಾದ ಚಿಕನ್ ಕುರ್ಮಾ.
ಬೇಕಾಗುವ ಸಾಮಾಗ್ರಿಗಳು: 8 ಬಾದಾಮಿ, 8 ಗೋಡಂಬಿ, 1 ಟೀಸ್ಪೂನ್ ಗಸಗಸೆ, 2 ಟೀಸ್ಪೂನ್ ತೆಂಗಿನತುರಿ, 4 ಟೇಬಲ್ ಚಮಚ-ಎಣ್ಣೆ, 2-ಈರುಳ್ಳಿ, 1 ಕಪ್-ಮೊಸರು, 1 ಟೇಬಲ್ ಚಮಚ-ತುಪ್ಪ, 10 ಏಲಕ್ಕಿ, 7-ಲವಂಗ, 2 ಟೀ ಸ್ಪೂನ್ ಬೆಳ್ಳುಳ್ಳಿ, 2 ಟೀಸ್ಪೂನ್-ಶುಂಠಿ, ¼ ಕೆಜಿ-ಚಿಕನ್, 1 ಟೀಸ್ಪೂನ್ ಉಪ್ಪು, 2 ಟೀಸ್ಪೂನ್-ಖಾರದಪುಡಿ, 2 ಟೀ ಸ್ಪೂನ್-ಕೊತ್ತಂಬರಿ ಪುಡಿ, 1 ಟೀಸ್ಪೂನ್-ಗರಂ ಮಸಾಲ, ½ ಕಪ್-ನೀರು.
ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಬಾದಾಮಿ, ಗೋಡಂಬಿ, ಗಸಗಸೆ ಹಾಕಿ ಹುರಿದುಕೊಳ್ಳಿ. ನಂತರ ಇದಕ್ಕೆ ತೆಂಗಿನ ತುರಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಮಿಕ್ಸಿ ಜಾರಿಗೆ ಹಾಕಿ ನೀರು ಸೇರಿಸದೆ ರುಬ್ಬಿಕೊಳ್ಳಿ. ನಂತರ ಒಂದು ಪ್ಯಾನ್ ಗೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಆಮೇಲೆ ಕತ್ತರಿಸಿಟ್ಟುಕೊಂಡ ಈರುಳ್ಳಿ ಹಾಕಿ ಹುರಿಯಿರಿ. ಈರುಳ್ಳಿಯನ್ನು ರುಬ್ಬಿಕೊಂಡ ಮಿಶ್ರಣವಿರುವ ಮಿಕ್ಸಿ ಜಾರಿಗೆ ಹಾಕಿ ಮತ್ತೊಮ್ಮೆ ರುಬ್ಬಿಕೊಳ್ಳಿ. ಇದಾದ ಮೇಲೆ ಒಂದು ಅಗಲವಾದ ಪಾತ್ರೆಯನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ತುಪ್ಪ ಹಾಕಿ. ಲವಂಗ, ಏಲಕ್ಕಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ 2 ನಿಮಿಷ ಕೈಯಾಡಿಸಿ.
ಆಮೇಲೆ ಚಿಕನ್ ಅನ್ನು ಸೇರಿಸಿ ಉಪ್ಪು, ಖಾರದ ಪುಡಿ, ಕೊತ್ತಂಬರಿ ಪುಡಿ, ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಿಮ್ಮ ಹದಕ್ಕೆ ತಕ್ಕತೆ ನೀರು ಸೇರಿಸಿ ಸ್ವಲ್ಪ ಗರಂ ಮಸಾಲ ಹಾಕಿ ಕುದಿಯಲು ಬಿಡಿ. ಕೊತ್ತಂಬರಿಸೊಪ್ಪಿನಿಂದ ಅಲಂಕರಿಸಿದರೆ ರುಚಿಕರವಾದ ಚಿಕನ್ ಕುರ್ಮಾ ಸವಿಯಲು ಸಿದ್ಧ.