ಚಾಕೋಲೇಟ್ ಕೇಕ್ ಎಂದಾಕ್ಷಣ ಬಾಯಲ್ಲಿ ನೀರೂರುತ್ತದೆ. ಮಕ್ಕಳಿಗಂತೂ ಈ ಕೇಕ್ ಎಂದರೆ ಪಂಚಪ್ರಾಣ. ಹೊರಗಡೆ ಬೇಕರಿಯಿಂದ ತಂದು ಮಕ್ಕಳಿಗೆ ಕೊಡುವುದಕ್ಕಿಂತ ಮನೆಯಲ್ಲಿ ರುಚಿಕರವಾದ ಬಾಳೆಹಣ್ಣಿನ ಚಾಕೋಲೇಟ್ ಕೇಕ್ ಕೊಡಿ. ಮಾಡುವ ವಿಧಾನ ಕೂಡ ಸುಲಭವಿದೆ.
ಬೇಕಾಗುವ ಸಾಮಾಗ್ರಿಗಳು-2 ಬಾಳೆಹಣ್ಣು, ½ ಕಪ್ ಸಕ್ಕರೆ, 1 ½ ಕಪ್ ಮೈದಾ ಹಿಟ್ಟು, ½ ಕಪ್ ಎಣ್ಣೆ, 1 ಟೀ ಸ್ಪೂನ್ ವೆನಿಲ್ಲಾ ಎಸೆನ್ಸ್, 1 ಟೀ ಸ್ಪೂನ್-ವಿನೇಗರ್, ½ ಕಪ್-ಕೋಕೋ ಪೌಡರ್, 1 ಟೀ ಸ್ಪೂನ್-ಬೇಕಿಂಗ್ ಪೌಡರ್, ¼ ಟೀ ಸ್ಪೂನ್-ಬೇಕಿಂಗ್ ಸೋಡ, ¼ ಟೀ ಸ್ಪೂನ್ ಉಪ್ಪು, ½ ಕಪ್ ನೀರು.
ಮೊದಲಿಗೆ ಬಾಳೆಹಣ್ಣನ್ನು ಸಕ್ಕರೆಯೊಂದಿಗೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಇದಕ್ಕೆ ನೀರನ್ನು ಸೇರಿಸಬೇಡಿ. ನಂತರ ಇದನ್ನು ಇನ್ನೊಂದು ದೊಡ್ಡ ಬೌಲ್ ಗೆ ಹಾಕಿ. ಇದಕ್ಕೆ ಎಣ್ಣೆ, ವಿನೇಗರ್, ವೆನಿಲ್ಲಾ ಎಸೆನ್ಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ನಂತರ ಇದಕ್ಕೆ ಜರಡಿ ಹಿಡಿದ ಮೈದಾ ಹಿಟ್ಟು, ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್, ತುಸು ಉಪ್ಪು ಹಾಕಿ. ಗಂಟಾಗದಂತೆ ಚೆನ್ನಾಗಿ ತಿರುಗಿಸಿ. ನಂತರ ಇದಕ್ಕೆ ನೀರು ಸೇರಿಸಿ. ದೋಸೆ ಹಿಟ್ಟಿನ ಹದಕ್ಕೆ ಬರುವಂತೆ ಇರಲಿ ಮಿಶ್ರಣ. ನಂತರ ಕೇಕ್ ಪ್ಯಾನ್ ಗೆ ಮಿಶ್ರಣವನ್ನು ಹಾಕಿ. ಓವೆನ್ ನಲ್ಲಿ 40 ನಿಮಿಷ ಬೇಯಿಸಿಕೊಂಡರೆ ರುಚಿಯಾದ ಬಾಳೆಹಣ್ಣಿನ ಚಾಕೋಲೇಟ್ ಕೇಕ್ ರೆಡಿ.