ಮೆಂತೆ ಸೊಪ್ಪಿನಲ್ಲಿ ಸಾಕಷ್ಟು ಪೋಷಕಾಂಶ, ನಾರಿನಾಂಶ, ವಿಟಮಿನ್ ಸಿ ಇದೆ. ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಆದರೆ ಎಲ್ಲರಿಗೂ ಮೆಂತೆಸೊಪ್ಪು ಇಷ್ಟವಾಗಲ್ಲ. ಅಂತಹವರು ಮೆಂತೆಸೊಪ್ಪಿನಿಂದ ರುಚಿಕರವಾದ ಕಡುಬು ಮಾಡಿಕೊಂಡು ತಿನ್ನಬಹುದು.
ಬೇಕಾಗುವ ಸಾಮಾಗ್ರಿ:
1 ಕಪ್ ಅಕ್ಕಿಹಿಟ್ಟು, 1 ಟೀ ಸ್ಪೂನ್ ಓಂ ಕಾಳು, ಸಣ್ಣಗೆ ಹೆಚ್ಚಿದ ಈರುಳ್ಳಿ ¼ ಕಪ್, ½ ಕಪ್ ಮೆಂತೆಸೊಪ್ಪು, 1 ಹಸಿಮೆಣಸಿನಕಾಯಿ ಸಣ್ಣಗೆ ಕತ್ತರಿಸಿಕೊಳ್ಳಿ. ಎಣ್ಣೆ-1 ಟೇಬಲ್ ಸ್ಪೂನ್, ಉಪ್ಪು ರುಚಿಗೆ ತಕ್ಕಷ್ಟು. ಒಗ್ಗರಣೆಗೆ-ಸ್ವಲ್ಪ ಎಣ್ಣೆ, ಸಾಸಿವೆ, ಜೀರಿಗೆ ಕರಿಬೇವು.
ಮಾಡುವ ವಿಧಾನ:
ಮೊದಲಿಗೆ ಒಂದು ಅಗಲವಾದ ಪಾತ್ರೆಗೆ ಅಕ್ಕಿಹಿಟ್ಟು, 1 ಟೇಬಲ್ ಸ್ಪೂನ್ ಎಣ್ಣೆ, ಉಪ್ಪು, ಓಂಕಾಳು ಸೇರಿಸಿ. ನಂತರ ಇದಕ್ಕೆ ಸ್ವಲ್ಪ ಸ್ವಲ್ಪ ನೀರು ಸೇರಿಸಿ ಉಂಡೆ ಕಟ್ಟುವ ಹದಕ್ಕೆ ನಾದಿಕೊಳ್ಳಿ. ಇದರಿಂದ ಚಿಕ್ಕಚಿಕ್ಕದಾಗಿ ಉಂಡೆ ಮಾಡಿಕೊಂಡು ಇಡ್ಲಿ ಪಾತ್ರೆಯಲ್ಲಿ 30 ನಿಮಿಷ ಬೇಯಿಸಿಕೊಳ್ಳಿ.
ನಂತರ ಗ್ಯಾಸ್ ಮೇಲೆ ಒಂದು ಅಗಲವಾದ ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಸಾಸಿವೆ, ಜೀರಿಗೆ ಕರಿಬೇವು ಹಾಕಿ. ನಂತರ ಈರುಳ್ಳಿ, ಮೆಂತೆ ಸೊಪ್ಪು, ಹಸಿಮೆಣಸು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಮೆಂತೆ ಸೊಪ್ಪು ಚೆನ್ನಾಗಿ ಹಬೆಯಲ್ಲಿಯೇ ಬೇಯಲಿ. ನಂತರ ಇದಕ್ಕೆ ಬೇಯಿಸಿಕೊಂಡ ಅಕ್ಕಿ ಹಿಟ್ಟಿನ ಉಂಡೆಗಳನ್ನು ಹಾಕಿ 5 ನಿಮಿಷ ಬೇಯಿಸಿಕೊಂಡರೆ ರುಚಿಯಾದ ಮೆಂತೆಸೊಪ್ಪಿನ ಕಡುಬು ರೆಡಿ.