ಆರ್.ಕೆ. ಬೀಚ್ ವಿಶಾಖಪಟ್ಟಣಂ ನಲ್ಲಿದೆ. ಈ ಬೀಚ್ ಅನ್ನು ರಾಮಕೃಷ್ಣ ಬೀಚ್ ಎಂದು ಕರೆಯುತ್ತಾರೆ. ಇದು ವಿಶಾಖಪಟ್ಟಣಂ ರೈಲ್ವೆ ನಿಲ್ದಾಣದಿಂದ 4 ಕಿ.ಮೀ ದೂರದಲ್ಲಿದೆ. ವಿಶಾಖಪಟ್ಟಣಂನ ಅತ್ಯಂತ ಜನಪ್ರಿಯ ಬೀಚ್ ಹಾಗೂ ನಗರದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.
ಆರ್.ಕೆ. ಬೀಚ್ ಅನ್ನು ವಿಶಾಖಪಟ್ಟಣಂ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿವಿ) ಮತ್ತು ವಿಶಾಖಪಟ್ಟಣಂ ನಗರಾಭಿವೃದ್ಧಿ ಪ್ರಾಧಿಕಾರ (ವುಡಾ) ಜಂಟಿಯಾಗಿ ಅಭಿವೃದ್ಧಿಪಡಿಸಿವೆ.
ಜಲಾಂತರ್ಗಾಮಿ ವಸ್ತುಸಂಗ್ರಹಾಲಯ, ವಿಶಾಖ ವಸ್ತು ಸಂಗ್ರಹಾಲಯ, ಶ್ರೀ ರಾಮಕೃಷ್ಣ ಮಿಷನ್ ಆಶ್ರಮ, ಅಕ್ವೇರಿಯಂ, ಕಾಳಿ ದೇವಾಲಯ, ಪ್ರಮುಖ ವ್ಯಕ್ತಿಗಳ ಪ್ರತಿಮೆಗಳು, ರಸ್ತೆ ಬದಿಯ ರೆಸ್ಟೋರೆಂಟ್‌ಗಳು ಮತ್ತು ಉದ್ಯಾನವನಗಳು ಆರ್ ಕೆ ಬೀಚ್ನ ಆಕರ್ಷಣೆಗಳಾಗಿವೆ.
ಕಲ್ವರಿ ವರ್ಗದ ಜಲಾಂತರ್ಗಾಮಿ ನೌಕೆಯನ್ನು ಸಂರಕ್ಷಿಸುವ ಐಎನ್ಎಸ್ ಕುರ್ಸುರಾ ಜಲಾಂತರ್ಗಾಮಿ ವಸ್ತು ಸಂಗ್ರಹಾಲಯಕ್ಕೆ ಈ ಬೀಚ್ ಹೆಚ್ಚು ಹೆಸರುವಾಸಿಯಾಗಿದೆ. ಬೀಚ್ ತೀರದಲ್ಲಿರುವ ‘ವಿಕ್ಟರಿ ಎಟ್ ಸೀ’ ಎಂಬ ಯುದ್ಧ ಸ್ಮಾರಕವನ್ನು 1971 ರ ಯುದ್ಧದ ಸೈನಿಕರಿಗೆ ಗೌರವಾರ್ಥವಾಗಿ ನಿರ್ಮಿಸಲಾಯಿತು.
ಆರ್. ಕೆ. ಬೀಚ್ ಕುಟುಂಬ ವಿಹಾರಕ್ಕೆ ಪ್ರಸಿದ್ಧವಾಗಿದ್ದು, ಇದು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ರಾಮಕೃಷ್ಣ ಬೀಚ್ ಈಜಲು ಸುರಕ್ಷಿತವಲ್ಲ. ಆದರೆ ಇಲ್ಲಿ ಸನ್ ಬಾತಿಂಗ್, ಬೀಚ್ ವಾಲಿಬಾಲ್ ಮತ್ತು ವಾಟರ್ ಸರ್ಫಿಂಗ್ ಜನಪ್ರಿಯವಾಗಿದೆ. ಡೀಪ್ ಸೀ ಆಂಗ್ಲಿಂಗ್ ಮತ್ತೊಂದು ಪ್ರಮುಖ ಚಟುವಟಿಕೆಯಾಗಿದೆ.
ಆಂಧ್ರ ವಿಶ್ವವಿದ್ಯಾಲಯವು ಸಮುದ್ರ ಆಮೆಗಳನ್ನು ತಮ್ಮ ಸಂತಾನೋತ್ಪತ್ತಿ ಅವಧಿಯಲ್ಲಿ ಉಳಿಸಲು ಕಡಲತೀರದಲ್ಲಿ ವಿಶೇಷ ಸಂಶೋಧನಾ ಯೋಜನೆಗಳನ್ನು ನಡೆಸುತ್ತದೆ.