ವಾರದಲ್ಲಿ 50 ನಿಮಿಷ ಓಡಿದ್ರೂ ನಿಮ್ಮ ಆಯಸ್ಸು ಹೆಚ್ಚಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಯಾವುದೇ ಓಟವಾಗ್ಲಿ, ವಾರದಲ್ಲಿ 50 ನಿಮಿಷ ಓಡಿದ್ರೂ ಹೆಚ್ಚು ಕಾಲ ಬದುಕುವ ಸಾಧ್ಯತೆ ಶೇಕಡಾ 27ರಷ್ಟು ಹೆಚ್ಚಿರುತ್ತದೆಯಂತೆ. ಕ್ಯಾನ್ಸರ್ ಮತ್ತು ಹೃದ್ರೋಗದಿಂದ ಸಾವನ್ನಪ್ಪುವ ಅಪಾಯ ಕೂಡ ಶೇಕಡಾ 30 ರಿಂದ ಶೇಕಡಾ 23 ರಷ್ಟು ಕಡಿಮೆ ಇರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ವಯಸ್ಸಾದವರು ವಾರಕ್ಕೆ ಕನಿಷ್ಠ 75 ನಿಮಿಷಗಳ ಕಾಲ ವಾಕಿಂಗ್ ಮಾಡ್ಬೇಕಂತೆ. ಓಟದಿಂದ ಆಯಸ್ಸು ವೃದ್ಧಿಯಾಗುತ್ತದೆ ಎಂದು ವಿಶ್ವದಾದ್ಯಂತ ಎಲ್ಲ ಸಂಶೋಧಕರು ಒಪ್ಪಿಕೊಂಡಿದ್ದಾರೆ. ಮೆಲ್ಬೋರ್ನ್ನ ವಿಕ್ಟೋರಿಯಾ ವಿಶ್ವವಿದ್ಯಾಲಯದ ಸಂಶೋಧಕರು 2,33,149 ಜನರ ಮೇಲೆ 14 ವಿಭಿನ್ನ ಅಧ್ಯಯನಗಳನ್ನು ನಡೆಸಿದ್ದರು. ಅವುಗಳಲ್ಲಿ, 5.5 ವರ್ಷದಿಂದ 35 ವರ್ಷದವರೆಗಿನ ಜನರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲಾಗಿತ್ತು. ಈ ಸಂಶೋಧನೆಯ ಸಮಯದಲ್ಲಿ 25,951 ಜನರು ಸಾವನ್ನಪ್ಪಿದ್ದರು.
ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್ನಲ್ಲಿ ಪ್ರಕಟವಾದ ಲೇಖನದ ಪ್ರಕಾರ, ದೀರ್ಘಕಾಲದವರೆಗೆ ಓಡುವುದು ಹೆಚ್ಚು ನೆರವಿಗೆ ಬರುವುದಿಲ್ಲವಂತೆ. ನೀವು ಗಂಟೆಗೆ ಎಂಟು ಕಿಲೋಮೀಟರ್ ವೇಗದಲ್ಲಿ ವಾರಕ್ಕೆ 50 ನಿಮಿಷ ಓಡಿದರೆ ಅದು ಸಾಕು. ಸಂಶೋಧಕರ ಪ್ರಕಾರ, ಯಾವುದೇ ರೀತಿಯಲ್ಲಿ ಓಡುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ಹೆಚ್ಚು ಓಡುವುದರಿಂದ ನಿಮ್ಮ ಜೀವಿತಾವಧಿಯನ್ನು ಹೆಚ್ಚಿಸಬೇಕಾಗಿಲ್ಲ.
19 ರಿಂದ 64 ವರ್ಷದೊಳಗಿನ ಜನರು ಪ್ರತಿದಿನ ಕೆಲವು ದೈಹಿಕ ವ್ಯಾಯಾಮ ಮಾಡಬೇಕಾಗುತ್ತದೆ. ವಾರಕ್ಕೆ ಕನಿಷ್ಠ 150 ನಿಮಿಷಗಳಾದರೂ ವೇಗವಾಗಿ ನಡೆಯುವುದು ಅಥವಾ ಸೈಕ್ಲಿಂಗ್ ಮಾಡಬೇಕು. ತೂಕ ಎತ್ತುವ ತಾಲೀಮುಗಳನ್ನು ವಾರದಲ್ಲಿ ಕನಿಷ್ಠ ಎರಡು ದಿನ ಮಾಡಬೇಕು. ಇದು ಸಾಧ್ಯವಾಗದೆ ಹೋದಲ್ಲಿ ವಾರದಲ್ಲಿ 75 ನಿಮಿಷಗಳ ಕಾಲ ಓಡಬೇಕು.