ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ವಿವಿಧ ವ್ರತಗಳನ್ನು ಕೈಗೊಳ್ಳುವ ಹೆಣ್ಣು ಮಕ್ಕಳು ಇಷ್ಟಾರ್ಥ ಸಿದ್ದಿಗೆ ದೇವರನ್ನು ಪೂಜಿಸುತ್ತಾರೆ. ಈ ಶ್ರಾವಣದಲ್ಲಿ ಪೂಜಿಸುವ ಮಂಗಳಗೌರಿ ವ್ರತದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಮುತ್ತೈದೆ ಹೆಣ್ಣುಮಕ್ಕಳು ಮಂಗಳಗೌರಿ ವ್ರತದಲ್ಲಿ ಗೌರಿಯನ್ನು ಪೂಜಿಸುತ್ತಾರೆ. ಈ ವ್ರತವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುವುದು. ಮನೆ ಮತ್ತು ದೇವರ ಕೋಣೆಯನ್ನು ಸ್ವಚ್ಛಗೊಳಿಸಿ, ದೇವರ ಕೋಣೆಯನ್ನು ಅಲಂಕರಿಸಲಾಗುವುದು. ದೇವರ ಕೋಣೆಯನ್ನು ರಂಗೋಲಿ, ದೀಪ ಹೂವುಗಳಿಂದ ಅಲಂಕರಿಸುತ್ತಾರೆ.
ಗೌರಿ ಮೂರ್ತಿಗೆ ತುಂಬಾ ಅಲಂಕಾರ ಮಾಡುತ್ತಾರೆ. ದೇವರ ಕೋಣೆಯ ಮುಂಭಾಗದಲ್ಲಿ ರಂಗೋಲಿ ಹಾಕಿ, ಅದರಲ್ಲಿ ಮಣೆ ಇಟ್ಟು, ಅದರ ಮೇಲೆ ಬ್ಲೌಸ್ ಪೀಸ್ ಇಡುತ್ತಾರೆ. ನಂತರ ಅಕ್ಕಿ ಹಾಕಿ ಅದರ ಮೇಲೆ ಕಲಶ ಇಡುತ್ತಾರೆ. ಕಲಶದಲ್ಲಿ ಅರ್ಧ ಭಾಗದಷ್ಟು ಶುದ್ಧ ನೀರು ಹಾಕಿಡಬೇಕು. ಅದರ ಸುತ್ತ ವೀಳ್ಯದೆಲೆ ಜೋಡಿಸಿ ಅಲಂಕರಿಸಬೇಕು. ಸಾಮಾನ್ಯವಾಗಿ ಐದು ವೀಳ್ಯದೆಲೆ ಇಡುತ್ತಾರೆ.
ಬಳಿಕ ಒಂದು ತಟ್ಟೆಯಲ್ಲಿ ಅರಿಶಿಣ, ಕುಂಕುಮ, ತೇಯ್ದ ಗಂಧ ಮತ್ತಿತರ ಪೂಜಾ ಸಾಮಗ್ರಿಗಳನ್ನು ಇಡಲಾಗುವುದು. ನಂತರ ಕಲಶದ ಬಾಯಿಯ ಮೇಲೆ ತೆಂಗಿನಕಾಯಿಯನ್ನು ಕೆಂಪು ಬಟ್ಟೆಯಿಂದ ಸುತ್ತಿ ಇಡಬೇಕು. ಹೂವು, ಹಣ್ಣು, ತೆಂಗಿನಕಾಯಿಯನ್ನು ದೇವರ ಎದುರು ಇಡಬೇಕು. ಜೊತೆಗೆ ಪಾಯಸ ಕೂಡ ಮಾಡಿ ಇಡಬೇಕು. ಪೂಜೆ ಮಾಡುವಾಗ ತೇಯ್ದ ಗಂಧ, ಕೆಂಪು ಹೂವು, ಅಗರಬತ್ತಿ ಮತ್ತು ದೀಪಗಳು ಜೊತೆಗಿರಲಿ, ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳು, ಮದುವೆಯಾಗಿ ಐದು ವರ್ಷ ಆಗಿರದ ಮುತ್ತೈದೆಯರು ಸೇರಿ ಪೂಜೆ ಮಾಡಿ ಮಂಗಳಗೌರಿ ಪೂಜಿಸಲು ಬಂದ ಹೆಣ್ಣು ಮಕ್ಕಳಿಗೆ ಉಡುಗೊರೆ, ಅರಿಶಿಣ, ಕುಂಕುಮ ನೀಡಿ ಆಶೀರ್ವಾದ ಪಡೆಯಬೇಕು. ಇದೇ ಮಂಗಳಗೌರಿ ವ್ರತದ ವಿಶೇಷ.